ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ನೌಕರರು ದೇವರ ಮೊರೆ ಹೋಗಿದ್ದಾರೆ.
ಯಶವಂತಪುರ ಸರ್ಕಲ್ ಬಳಿಯ ಗಾಯಿತ್ರಿ ದೇವಸ್ಥಾನದಲ್ಲಿ ಸಾರಿಗೆ ನೌಕರರು ಸೇರಿದ್ದಾರೆ. ಅಲ್ಲದೆ ದೇವಿಯ ಮುಂದೆ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದಾರೆ.
ನಿನ್ನೆಯಿಂದ ಆರಂಭ ಆಗಿರುವ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ. ಹೀಗಾಗಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ಸುಗಳು ಇಂದು ರೋಡಿಗಿಳಿದಿಲ್ಲ.
ಬಸ್ಸುಗಳನ್ನು ಡಿಪೋದಲ್ಲಿ ಹಾಕಿರುವ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ಮುಂದುವರಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರನ್ನಾಗಿ ಮಾಡಬೇಕು ಅನ್ನೋದ್ರಿಂದ ಹಿಡಿದು ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಸರ್ಕಾರ ಪ್ರತಿಭಟನಾನಿರತ ಸಿಬ್ಬಂದಿಯ ಪ್ರತಿನಿಧಿಗಳ ಜೊತೆಗೆ ಸಂಧಾನಕ್ಕೆ ಗಂಭೀರ ಪ್ರಯತ್ನ ಮಾಡಿದಂತಿಲ್ಲ.
ಕೆಎಸ್‍ಆರ್‍ಟಿಸಿ ಸಿಬ್ಬಂದಿಯನ್ನು ಪ್ರತಿನಿಧಿಸುವ ಸಿಐಟಿಯು ಅಧ್ಯಕ್ಷ ಅನಂತ್ ಸುಬ್ಬರಾವ್ ಜೊತೆಗೆ ನಿನ್ನೆಯಷ್ಟೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಯಲ್ಲಿ ಸಿಐಟಿಯು ಪಾಲ್ಗೊಂಡಿಲ್ಲ. ಅಷ್ಟೇ ಅಲ್ಲದೇ ಈ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಸಿಐಟಿಯು ಹೇಳಿದೆ. ಇತ್ತ ಬೆಂಗಳೂರಲ್ಲಿ ರೈತರು ನಡೆಸಿದ್ದ ಹೋರಾಟದಲ್ಲಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯೂ ಪಾಲ್ಗೊಂಡಿದ್ದರು. ಈ ವೇಳೆ ಸಿಬ್ಬಂದಿಯನ್ನ ಸರ್ಕಾರ, ಪೊಲೀಸರನ್ನು ಬಳಸಿ ವಶಕ್ಕೆ ಪಡೆದು ಎಳೆದೊಯ್ದಿತ್ತು. ಇದು ಸಾರಿಗೆ ಸಿಬ್ಬಂದಿ ಕೆಂಗಣ್ಣಿಗೆ ಕಾರಣವಾಗಿದೆ.