– ಅವನು ಯಾರ್ರೀ, ಅರಸೀಕೆರೆ ಜನಕ್ಕೆ ಏನೇನೋ ಸುಳ್ಳು ಹೇಳ್ತಾರೇನ್ರೀ
ಹಾಸನ: ಕಾನೂನು ಪ್ರಕಾರ ಈ ಬಾರಿ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್‍ಟಿ ಮೀಸಲಾತಿ ಬಂದಿದೆ ಎನ್ನುವುದಾದರೆ ದೇವರ ಮುಂದೆ ಬಂದು ಪ್ರಮಾಣ ಮಾಡಲಿ. ನಾನು ಹೇಳುತ್ತಿರುವುದು ಕಾನೂನಿನಲ್ಲಿ ತಪ್ಪಿದ್ದರೆ ಬೆಳಗ್ಗೆಯೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಬಿಎಸ್‍ವೈ ರಾಜಕೀಯ ಕಾರ್ಯದರ್ಶಿ ಎನ್‍ಆರ್.ಸಂತೋಷ್‍ಗೆ ಶಾಸಕ ಶಿವಲಿಂಗೇಗೌಡ ಬಹಿರಂಗ ಸವಾಲು ಹಾಕಿದ್ದಾರೆ.
ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಎಸ್‍ಟಿಗೆ ಮೀಸಲಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಬಹುಮತವಿದ್ದರೂ, ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಬಿಜೆಪಿ ಪಾಲಾಗಲಿದೆ. ಈ ಮೀಸಲಾತಿ ದೋಷದಿಂದ ಕೂಡಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಸಿಎಂ ಆಪ್ತ ಸಂತೋಷ್
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಂತೋಷ್, ಮೀಸಲಾತಿಯಲ್ಲಿ ಯಾವುದೇ ತಪ್ಪಾಗಿಲ್ಲ. ಶಾಸಕ ಶಿವಲಿಂಗೇಗೌಡ ಅವರ ಕಾನೂನು ಹೋರಾಟದ ಬಗ್ಗೆ ಅರಸೀಕೆರೆಯ ಎಸ್‍ಟಿ ಸಮುದಾಯದ ಜನರ ಮನೆಗಳಿಗೆ ಹೋಗಿ ತಿಳಿಸುವುದಾಗಿ ಹೇಳಿದ್ದರು. ಸಂತೋಷ್ ಹೇಳಿಕೆಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶಾಸಕ ಶಿವಲಿಂಗೇಗೌಡ, ಅವನು ಯಾರ್ರೀ. ಅರಸೀಕೆರೆ ಜನಕ್ಕೆ ಏನೇನೋ ಸುಳ್ಳು ಹೇಳ್ತಾರೇನ್ರೀ. ಎಸ್‍ಟಿ ಸದಸ್ಯ ಜೆಡಿಎಸ್‍ನಿಂದ ಗೆದ್ದಿದ್ದರೆ ಮೀಸಲಾತಿ ಮಾಡಿಸುತ್ತಿದ್ದರಾ. ಇವನು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಲಿ.
ಎಲ್ಲೆಲ್ಲಿ ಬಿಜೆಪಿಯವರನ್ನು ತಂದು ಕೂರಿಸಬಹುದೋ ಅಲ್ಲೆಲ್ಲ ಮೀಸಲಾತಿ ತಂದಿದ್ದಾರೆ. ಅಸೆಂಬ್ಲಿ ನಡೆದಿದ್ದರೆ ನಾವು ಏನು ಎಂದು ತೋರಿಸುತ್ತಿದ್ದೆವು. ಇವನು ತಲೆಕೆಳಗಾಗಿ ನಿಂತರು ಎಸ್‍ಟಿ ಜನಾಂಗ ಇವನನ್ನು ನಂಬುತ್ತಾ. ಅರಸೀಕೆರೆಯಲ್ಲಿ ನೆಮ್ಮದಿ ರಾಜಕಾರಣ ಇತ್ತು. ಈಗ ಬೆಂಕಿಯಿಡಲು ಬಂದಿದ್ದಾರೆ. ನಾನು ಅರಸೀಕೆರೆಯಲ್ಲಿ ಜಾತಿ ರಾಜಕಾರಣ ಮಾಡಿದ್ದೇನೆ ಅಂದರೆ ಅವರ ಮನೆಯಲ್ಲಿ ಜೀತ ಮಾಡುತ್ತೇನೆ. ನಾನು ಕೂಡ ಮನೆ ಮನೆಗೆ ಹೋಗುತ್ತೇನೆ. ಆ ಜನಾಂಗದವರಿಗೆ ಎಲ್ಲವನ್ನೂ ತಿಳಿಸುತ್ತೇನೆ. ಶಿವಲಿಂಗೇಗೌಡನನ್ನೇನಾದ್ರು ನೀವು ಕೆಣಕಿದ್ರೆ ರಾಜಕೀಯದಲ್ಲಿ ಜನ ನಿಮ್ಮನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸುತ್ತಾರೆ ನೋಡ್ತೀರಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ