‘ದೇವರೇ ಕಾಪಾಡಬೇಕು’ – ಹೇಳಿಕೆ ನೀಡಿದ್ದು ಯಾಕೆಂದು ವಿವರಿಸಿದ ಶ್ರೀರಾಮುಲು

Public TV
2 Min Read
Sriramulu

ಬೆಂಗಳೂರು: ನನ್ನ ಹೇಳಿಕೆಯನ್ನು ಪ್ರಸ್ತಾಪಿಸಿ ಸಿಎಂ ಸೇರಿದಂತೆ ಮಂತ್ರಿಗಳು ರಾಜೀನಾಮೆ ನೀಡಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಈಗ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಮಂತ್ರಿಗಳ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ, ಆರೋಪಗಳು ಸತ್ಯಕ್ಕೆ ದೂರವಾದದ್ದು, ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು, ಸೋಂಕು ತಡೆಯುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ ಎಂದು ಹೇಳುವ ಸಂರ್ಭದಲ್ಲಿ, ‘ಇನ್ನೂ ಎಡವಿದರೆ ದೇವರೇ ಕಾಪಾಡಬೇಕು’ ಎಂದು ಹೇಳಿದ ಎಚ್ಚರಿಕೆಯ ಮಾತುಗಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಒಬ್ರು ದೇವರ ಮೇಲೆ ಭಾರ ಹಾಕ್ತಾರೆ, ಮತ್ತೊಬ್ರು ದೇವರ ಕಥೆ ಹೇಳ್ತಾರೆ: ಡಿಕೆಶಿ

ಸರ್ಕಾರ, ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಚಿವರುಗಳು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಈ ಶತಮಾನದ ಸವಾಲೊಂದನ್ನು ಸಮರ್ಥವಾಗಿ ಎದುರಿಸಿ ಗೆಲ್ಲಲು, ಜನರಿಗಾಗಿ ದುಡಿಯುತ್ತಿದ್ದೇವೆ. ತಪ್ಪಾಗಿ ಅರ್ಥೈಸಲಾದ ಮಾತಿಗೆ ನನ್ನ ಸ್ಪಷ್ಟನೆ ಎಂದು ಬರೆದುಕೊಂಡಿದ್ದಾರೆ.

ಡಿಕೆಶಿ ಹೇಳಿದ್ದೇನು?
ಜನರ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಮಂತ್ರಿಗಳು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಜನರನ್ನು ರಕ್ಷಿಸುವುದು ದೇವರ ಕೈಯಲ್ಲಿದೆ ಎಂಬ ಶ್ರೀರಾಮುಲು ಹೇಳಿಕೆ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಬಹಳ ಶ್ರಮವಹಿಸಿ ಬಿಜೆಪಿಯವರು ಸರ್ಕಾರವನ್ನು ತಂದಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗದೇ ಇದ್ದರೆ ರಾಜೀನಾಮೆ ನೀಡಿ ರಾಜ್ಯಪಾಲರ ಆಡಳಿತ ಬರಲಿ ಎಂದು ವಾಗ್ದಾಳಿ ನಡೆಸಿದರು.

ಈಗ ನಮ್ಮ ಕೈಯಲ್ಲಿ ಆಗ್ತಿಲ್ಲ ದೇವರೆ ಕಾಪಾಡಪ್ಪ ಎಂದು ಶ್ರೀರಾಮುಲು ಹೇಳುತ್ತಾರೆ. ಶ್ರೀರಾಮುಲು ಹೇಳಿಕೆ ಅಲ್ಲ ಇದು ಸರ್ಕಾರದ ಹೇಳಿಕೆ. ಇನ್ನೊಬ್ಬ ಸಚಿವರು ದಿನ ದೇವರ ಕಥೆ ಹೇಳ್ತಾರೆ. ದೇವರ ಮೇಲೆ ನಂಬಿಕೆ ಇಡಲಿ. ಸರ್ಕಾರ ಹೇಗೆ ಕೊರೊನಾವನ್ನು ಹೇಗೆ ನಿಯಂತ್ರಿಸಿದೆ ಎನ್ನುವುದು ತಿಳಿದೆ. ಎಲ್ಲರೂ ರಾಜೀನಾಮೆ ನೀಡಿ ಅಧಿಕಾರಿಗಳು ರಾಜ್ಯವನ್ನು ನೋಡಿಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *