ದಾವಣಗೆರೆ: ಕೊರೊನಾ ಪಾಸಿಟಿವ್ ಬಂದಿದೆ ಎಂದು ಕರೆದೊಯ್ಯಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಮುಂದೆ ದೇವರು ಬಂದಿದೆ ಎಂದು ಮಹಿಳೆಯೊಬ್ಬರು ಹೈಡ್ರಾಮ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗ್ರಾಮದಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಿಸಿದ್ದು, ಜೋಗಮ್ಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತ ಮಹಿಳೆಯನ್ನು ಅಧಿಕಾರಿಗಳು ಕರೆದೊಯ್ಯಲು ಹೋದಾಗ ಮಹಿಳೆ ದೇವರು ಬಂದಿದೆ ಎಂದು ಕೂಗಾಡುತ್ತಾ ಮನಬಂದಂತೆ ಎಲ್ಲರನ್ನೂ ನಿಂದಿಸಿದ್ದಾರೆ. ಕೊನೆಗೆ ಪೊಲೀಸರು ಕಾಲಿಗೆ ಬೀಳಬೇಕು ಎಂದು ಹಠ ಹಿಡಿದು ಅಂಬುಲೆನ್ಸ್ ಮುಂದೆ ಕುಳಿತಿದ್ದಾರೆ.
ಸೋಂಕಿತ ಮಹಿಳೆಯನ್ನು ಕರೆದೊಯ್ದಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ದೇವಸ್ಥಾನ ಮುಂದೆ ಹೋಗಿ ಹಣ್ಣು ಕಾಯಿ ಹೊಡೆದು ಪೂಜೆ ಸಲ್ಲಿಸಿ ಹೋಗಿ ಎಂದು ಮಹಿಳೆ ಅವಾಜ್ ಹಾಕಿದ್ದಾರೆ. ಇದರಿಂದ ರೋಸಿಹೋದ ಪೊಲೀಸರು ಗ್ರಾಮದಲ್ಲಿ ಬೇರೋಬ್ಬರಿಗೆ ತೊಂದರೆಯಾಗಲಿ, ಇಲ್ಲ ನಿಮ್ಮಿಂದ ಸಾವನ್ನಪ್ಪಿದರೆ ನಿಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸುತ್ತೇವೆ ಎಂದು ಹೆದರಿಸಿದ್ದಾರೆ.
ಪೊಲೀಸರ ಮಾತಿಗೆ ಹೆದರಿದ ಮಹಿಳೆ ಕೊನೆಗೆ ತನ್ನ ಬಣ್ಣ ಬಯಲಾದ ಕೂಡಲೇ ಆಸ್ಪತ್ರೆಗೆ ತೆರಳಿದ್ದಾರೆ. ಘಟನೆಯಿಂದ ಕೆಲಕಾಲ ಗ್ರಾಮದಲ್ಲಿ ಜನರು ಆತಂಕಗೊಂಡಿದ್ದಾರೆ.