ರಾಯಚೂರು: ಜಿಲ್ಲೆಯ ದೇವದುರ್ಗದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರ ಗೋಳು ಕೇಳುವವರಿಲ್ಲ. ಕೊರೊನಾ ಭೀತಿಯಲ್ಲೇ ಕಚೇರಿ ಕೆಲಸಗಳಿಗೆ ಅಲೆದು ಅಲೆದು ಜನ ಸುಸ್ತಾಗುತ್ತಿದ್ದಾರೆ.
ಸರ್ಕಾರಿ ಕೆಲಸಗಳಿಗಾಗಿ ಉಪನೋಂದಣಾಧಿಕಾರಿ ಕಚೇರಿ ಮುಂದೆ ಜನ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಯಾವೊಬ್ಬ ಸಿಬ್ಬಂದಿ ಇಲ್ಲದೆ ಕುರ್ಚಿಗಳೆಲ್ಲಾ ಖಾಲಿಖಾಲಿಯಾಗಿವೆ. ಕಚೇರಿಗೆ ದಿನಾಲೂ ಮಧ್ಯಾಹ್ನ ವೇಳೆ ಆಗಮಿಸುವ ದೇವದುರ್ಗ ಸಬ್ ರಿಜಿಸ್ಟ್ರಾರ್ ವರ್ತನೆಯಿಂದ ಜನ ಬೇಸತ್ತಿದ್ದಾರೆ.
ಕಾಗದ ಪತ್ರಗಳಿಗಾಗಿ ಬೆಳಗ್ಗಿನಿಂದಲೇ ಮಿನಿ ವಿಧಾನಸೌಧಕ್ಕೆ ಹಳ್ಳಿಗಳಿಂದ ಬರುವ ನೂರಾರು ಜನ ಕೆಲಸಗಳು ಆಗದೇ ನಿತ್ಯ ಮರಳುತ್ತಿದ್ದಾರೆ. ಕಚೇರಿಯಲ್ಲಿರುವುದಕ್ಕಿಂತ ಹೆಚ್ಚು ಸಮಯ ಚಹಾ ಅಂಗಡಿಯಲ್ಲೆ ದೇವದುರ್ಗ ಮಿನಿ ವಿಧಾನಸೌಧ ಸಿಬ್ಬಂದಿ ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಚೇರಿ ಕೆಲಸಗಳಿಗೆ ದೇವದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸುವ ನೂರಾರು ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೇ ಓಡಾಡುತ್ತಾರೆ. ದೇವದುರ್ಗ ತಾಲೂಕು ಒಂದರಲ್ಲೇ 338 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು. ತಹಶೀಲ್ದಾರ್ ಕಚೇರಿ ಪಕ್ಕದಲ್ಲೇ ಕಂಟೈನ್ಮೆಂಟ್ ಝೋನ್ ಇದ್ದು ಸಂಪೂರ್ಣ ಸೀಲ್‍ಡೌನ್ ಆಗಿದೆ.