ರಾಯಚೂರು: ಕಳೆದ ವರ್ಷದ ಪ್ರವಾಹಕ್ಕೆ ಮುಳುಗಡೆಯಾಗಿದ್ದ ರಾಯಚೂರಿನ ದೇವದುರ್ಗದ ಐತಿಹಾಸಿಕ ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಈ ಬಾರಿಯೂ ಮುಳುಗಡೆ ಭೀತಿ ಎದುರಿಸುತ್ತಿದೆ.
ಈಗಾಗಲೇ ದೇವಾಲಯದ ಆಧಾರ ಸ್ಥಂಬಗಳು ಜಲಾವೃತವಾಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ ವರ್ಷ ದೇವಾಲಯ ಪಕ್ಕದಲ್ಲಿರುವ ಅರ್ಚಕರು ಹಾಗೂ ಗ್ರಾಮದ ಹಲವಾರು ಕುಟುಂಬಗಳು ಪ್ರವಾಹದ ಹೊಡೆತಕ್ಕೆ ನಲುಗಿದ್ದವು. ಈ ಬಾರಿ ನಾರಾಯಣಪುರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿಸಿದಲ್ಲಿ ಮತ್ತೆ ದೇವಾಲಯ ಮುಳುಗಡೆಯಾಗಲಿದೆ.
ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಕೃಷ್ಣ ನದಿಗೆ 1.80 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಯಚೂರಿನ ಲಿಂಗಸೂಗೂರು ತಾಲೂಕಿನ ಕಡದರಗಡ್ಡಿ ನಡುಗಡ್ಡೆ ಗ್ರಾಮಸ್ಥರಿಗೆ ಈ ಬಾರಿಯೂ ಗೋಳು ತಪ್ಪಿಲ್ಲ. ಈ ಪರಿಪ್ರಮಾಣದಲ್ಲಿ ನೀರು ಧಾವಿಸಿದರೂ ನಡುಗಡ್ಡೆ ಜನ ಪ್ರಾಣಪಣಕ್ಕಿಟ್ಟು ತೆಪ್ಪದಲ್ಲಿ ಓಡಾಡುತ್ತಿದ್ದಾರೆ. ಗೋನವಾಟ್ಲ ಗ್ರಾಮದಿಂದ ಕಡದರಗಡ್ಡಿಗೆ ತೆಪ್ಪದಲ್ಲಿಯೇ ಓಡಾಡುತ್ತಿದ್ದಾರೆ.
ಶೀಲಹಳ್ಳಿ ಸೇತುವೆ ಮುಳುಗಡೆಯಿಂದ ಕಡದರಗಡ್ಡಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು, ಕಡದರಗಡ್ಡಿಯಿಂದ ಲಿಂಗಸೂಗೂರಿಗೆ ಸುತ್ತಿಕೊಂಡು ಹೋಗಬೇಕು. ಹೀಗಾಗಿ ನದಿಯಲ್ಲಿ ಹರಸಾಹಸ ಮಾಡಿ, ಜೀವದ ಹಂಗು ತೊರೆದು ತುಂಬು ನದಿಯಲ್ಲಿ ತೆಪ್ಪದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳು, ಮಹಿಳೆಯರನ್ನು ಸಹ ಗ್ರಾಮಸ್ಥರು ತೆಪ್ಪದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.