ಉಡುಪಿ: ಜೂನ್ ಎಂಟರಿಂದ ಮುಜರಾಯಿ ದೇವಸ್ಥಾನಗಳು ತೆರೆದುಕೊಳ್ಳುತ್ತವೆ. ದೇವಸ್ಥಾನದಲ್ಲಿ ಕುಂಕುಮ, ಗಂಧ ಕೊಡ್ತೇವೆ ಆದ್ರೆ ತೀರ್ಥ ಕೊಡುವುದಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಎಲ್ಲ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಅಧೀನ ದೇವಸ್ಥಾನಗಳು ನಾಳೆಯಿಂದ ತೆರೆಯುವುದಿಲ್ಲ. ಈ ಹಿಂದೆ ಜೂನ್ 1ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲಿವೆ ಎಂದು ಹೇಳಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಸಹಮತ ನಿರೀಕ್ಷೆ ಮಾಡಲಾಗಿತ್ತು. ಕೇಂದ್ರ ಸರ್ಕಾರ ಜೂನ್ 8ರಿಂದ ತೆರೆಯಲು ಅನುಮತಿಸಿದೆ. ನಾವು ಕೇಂದ್ರದ ಆದೇಶವನ್ನು ಪಾಲಿಸುತ್ತೇವೆ ಎಂದರು.
Advertisement
Advertisement
ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನ, ಶ್ರದ್ಧಾಕೇಂದ್ರಗಳು ಜೂನ್ 8ರಂದು ಅಧಿಕೃತವಾಗಿ ತೆರೆಯಲಿವೆ. ಇಲಾಖೆಯಡಿ ಬಾರದ ದೇವಾಲಯಗಳನ್ನು ತೆರೆಯುವುದು ಅವರವರ ವಿವೇಚನೆಗೆ ಬಿಟ್ಟದ್ದು ಎಂದ ಸಚಿವರು, ಧಾರ್ಮಿಕ ಕೇಂದ್ರಗಳಲ್ಲಿ ಜಾತ್ರೆ, ಸಮಾರಂಭ, ಉತ್ಸವ ಮುಂತಾದ ಜನ ಸೇರಿಸುವ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಭಕ್ತರಿಗೆ ಗರ್ಭಗುಡಿ ಪ್ರವೇಶ ಇಲ್ಲ: ಈ ನಡುವೆ ಕೆಲ ಷರತ್ತುಗಳ ಬಗ್ಗೆ ವಿವರಣೆ ನೀಡಿದ ಅವರು, ದೇವಸ್ಥಾನಗಳ ಅರ್ಚಕರಿಗೆ ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಿದ್ದೇವೆ. ಭಕ್ತರು ದೇವರನ್ನು ಮುಟ್ಟಿ ಪೂಜೆ ಮಾಡಲು ಅವಕಾಶವಿಲ್ಲ. ದೇವಸ್ಥಾನಗಳಲ್ಲಿ ಶ್ರೀಗಂಧ ಅಥವಾ ಕುಂಕುಮ ನೀಡುವುಕ್ಕೆ ಮಾತ್ರ ಸೀಮಿತ ಮಾಡಿದ್ದು, ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು, ಅಧಿಕಾರಿಗಳು, ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ದೇವಸ್ಥಾನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಸ್ತೃತವಾದ ಮಾರ್ಗ ಸೂಚಿಯನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ. ಭಕ್ತರು ಕೊರೊನಾ ಹಿನ್ನೆಲೆಯಲ್ಲಿ ಒಂದಿಷ್ಟು ಕ್ರಮಗಳನ್ನು ಪಾಲಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದನ್ನು ಅನುಸರಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.