ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದ ಕುರಿತು ದೆಹಲಿ ಪೊಲೀಸರು ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಕೆಂಪು ಕೋಟೆ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ಧ್ವಂಸ ಮಾಡಲಾಗಿತ್ತು. ಈ ಹಿಂಸಾಚಾರದ ಕುರಿತು ಇದೀಗ ಪೊಲೀಸರು ದಂಗೆಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಈ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಮುಖದ ಚಹರೆಯ ಆಧಾರದ ಮೇಲೆ ಶಂಕಿತರನ್ನು ಗುರುತಿಸಿದ್ದಾರೆ. ಒಟ್ಟು 42 ಜನರನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್) ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, 20 ಜನರನ್ನು ವಾಟ್ಸಪ್ ವಿಡಿಯೋಗಳ ಮೂಲಕ ಪತ್ತೆ ಹಚ್ಚಲಾಗಿದೆ.
ಶಂಕಿತರ ಪತ್ತೆಗೆ ಈಗಾಗಲೇ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಶಂಕಿತರು ದೆಹಲಿ ಬಿಟ್ಟು ಪರಾರಿಯಾಗಿದ್ದು, ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಇನ್ನೂ ಹಲವರು ಮರಳಿ ತಮ್ಮ ಮೂಲ ಸ್ಥಳಗಳಿಗೆ ತೆರಳಿದ್ದಾರೆ, ಬಂಧಿತ ಇಬ್ಬರ ಪೈಕಿ ಒಬ್ಬನನ್ನು ಧರ್ಮೇಂದ್ರ ಸಿಂಗ್ ಹರ್ಮಾನ್ ಎಂದು ಗುರುತಿಸಲಾಗಿದೆ. ಹಿಂಸಾಚಾರದ ವಿಡಿಯೋ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದರಲ್ಲಿ ಧರ್ಮೇಂದ್ರ ಸಿಂಗ್ ಹರ್ಮಾನ್ ಪಾತ್ರ ಸಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ವೇಳೆ ಸಾವಿರಾರು ಜನ ದೆಹಲಿಯ ಕೆಂಪು ಕೋಟೆಯನ್ನು ಧ್ವಂಸ ಮಾಡಿದ್ದು, ಪೀಠೋಪಕರಣಗಳನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿ ಉದ್ಧಟತನ ಮೆರೆದಿದ್ದಾರೆ. ಪೊಲೀಸರು ಈ ವರೆಗೆ 124 ಜನರನ್ನು ಬಂಧಿಸಿದ್ದು, 44 ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ. ಅಲ್ಲದೆ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.