ದೆಹಲಿ ಗಲಭೆ- ಜೆಎನ್‍ಯು ಹಳೆ ವಿದ್ಯಾರ್ಥಿ ಉಮರ್ ಖಲೀದ್ ಬಂಧನ

Public TV
2 Min Read
jnu umar khalid

ನವದೆಹಲಿ: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ, ಹಳೆ ವಿದ್ಯಾರ್ಥಿ ಉಮರ್ ಖಲೀದ್‍ನನ್ನು  ಪೊಲೀಸರು ತಡರಾತ್ರಿ ಬಂಧಿಸಿದ್ದು, ಇಂದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ದೆಹಲಿ ಗಲಭೆ ಪ್ರಕರಣದಲ್ಲಿ ಪಾತ್ರವಹಿಸಿರುವ ಹಿನ್ನೆಲೆ ದೆಹಲಿಯ ವಿಶೇಷ ಪೊಲೀಸ್ ವಿಭಾಗ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಬಂಧಿಸಿದೆ. ಭಾನುವಾರ ತಡರಾತ್ರಿ ಬಂಧನದ ಬಳಿಕ ಸುಮಾರು 9 ಗಂಟೆಗಳ ಕಾಲ ಖಲೀದ್‍ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಂದು ದೆಹಲಿ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಸೆಪ್ಟೆಂಬರ್ 2 ರಂದು ಸಹ ಜೆಎನ್‍ಯುನ ಹಳೆ ವಿದ್ಯಾರ್ಥಿಯನ್ನು ವಿಶೇಷ ಪೊಲೀಸ್ ತಂಡ ವಿಚಾರಣೆ ನಡೆಸಿತ್ತು.

delhi violence 1

ಫೆಬ್ರವರಿ 24ರಿಂದ 26ರ ವರೆಗೆ ಜಫರಾಬಾದ್ ಶಾಕುರ್ ಬಸ್ತಿ, ಶಿವ ವಿಹಾರ, ಸಲೀಮ್‍ಪುರ ಸೇರಿದಂತೆ ಈಶಾನ್ಯ ದೆಹಲಿಯ ವಿವಿಧ ಭಾಗಗಳಲ್ಲಿ ತೀವ್ರ ತರವಾದ ಗಲಭೆ ನಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿ ಗ್ಯಾಂಗ್‍ಗಳ ನಡುವೆ ದೊಡ್ಡ ಮಾರಾಮಾರಿ ನಡೆದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ಹಾನಿ ಸಂಭವಿಸಿತ್ತು.

ಗಲಭೆಯಲ್ಲಿ ಕನಿಷ್ಟ 53 ಜನ ಜೀವ ಕಳೆದುಕೊಂಡಿದ್ದರು. 581 ಜನರಿಗೆ ತೀವ್ರ ಗಾಯಗಳಾಗಿದ್ದವು. ಇದರಲ್ಲಿ 97ಜನ ಕೇವಲ ಗುಂಡಿನಿಂದ ಗಾಯಗೊಂಡಿದ್ದರು. ಖಲೀದ್ ಜೊತೆಗೆ ಜಾಮಿಯಾ ವಿದ್ಯಾರ್ಥಿ ಹಾಗೂ ಆರ್‍ಜೆಡಿ ಯುವ ಮೋರ್ಚಾ ಅಧ್ಯಕ್ಷ ಮೀರನ್ ಹೈದರ್, ಜೆಸಿಸಿ ಮೀಡಿಯಾ ಕೋಆರ್ಡಿನೇಟರ್ ಸಫೂರಾ ಝರ್ಗರ್ ಹಾಗೂ ಡ್ಯಾನಿಶ್ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿತ್ತು.

delhi violence

ಇದೀಗ ಖಲೀದ್‍ನನ್ನು ಬಂಧಿಸಿರುವುದಾಗಿ ಅವರ ತಂದೆ ಖಚಿತಪಡಿಸಿದ್ದಾರೆ. ನನ್ನ ಮಗ ಖಲೀದ್‍ನನ್ನು ರಾತ್ರಿ 11ರ ಸುಮಾರಿಗೆ ವಿಶೇಷ ಪೊಲೀಸ್ ವಿಭಾಗದಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಈ ವರೆಗೆ ದೆಹಲಿ ವಿಶೇಷ ವಿಭಾಗದ ಪೊಲೀಸರು 1,575 ಜನರನ್ನು ಬಂಧಿಸಿದ್ದು, ಒಟ್ಟು 751 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ 250 ಚಾರ್ಜ್ ಶೀಟ್‍ಗಳನ್ನು ಸಲ್ಲಿಸಿದ್ದಾರೆ. ಒಟ್ಟು 1,153 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

delhi violence .2

ಇನ್ನೂ ವಿಶೇಷವೆಂಬಂತೆ ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೆಂದ್ರ ಯಾದವ್, ಅರ್ಥಶಾಸ್ತ್ರಜ್ಞ ಜಯತಿ ಘೋಷ್ ಹಾಗೂ ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವನಂದನ್ ವಿರುದ್ಧ ಪ್ರಚೋದನೆ ಹಾಗೂ ಘಟನೆಗೆ ಸಿದ್ಧಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *