ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಜೊತೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಸಮಿತಿ ರಚನೆಯ ಪ್ರಸ್ತಾಪವನ್ನ ರೈತ ಸಂಘಟನೆಗಳು ತಿರಸ್ಕರಿಸಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರು 32 ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ದೆಹಲಿ ಕೃಷಿ ಭವನದಲ್ಲಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ರೈತ ಸಂಘಟನೆಗಳ ಜೊತೆಗಿನ ಸಭೆಯಲ್ಲಿ ಕೃಷಿ ಕಾಯಿದೆಯ ಸಮಗ್ರ ಚರ್ಚೆಗೆ ರೈತರು, ಸರ್ಕಾರ ಮತ್ತು ತಜ್ಞರನ್ನು ಒಳಗೊಂಡ ಸಮಿತಿ ರಚಿಸೋ ಪ್ರಸ್ತಾಪ ಮುಂದಿಟ್ಟಿದ್ದರು. ಪ್ರತಿಯೊಂದು ಸಂಘಟನೆ ನಾಲ್ಕರಿಂದ ಐದು ಜನರ ಈ ಸಮಿತಿಯಲ್ಲಿ ಇರುತ್ತಾರೆ. ಅದರಂತೆ ಸರ್ಕಾರದ ಕೆಲ ಅಧಿಕಾರಿಗಳು ಮತ್ತು ಕೃಷಿ ತಜ್ಞರನ್ನೊಳಗೊಂಡ ಸಮಿತಿ ರಚಿಸುವುದು ಎಂದು ಹೇಳಿದ್ದರು. ಪ್ರಸ್ತಾಪಕ್ಕೂ ಮುನ್ನ ರೈತ ಸಂಘಟನೆಗಳಿಗೆ ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಮಾಹಿತಿಯನ್ನ ಎಲ್‍ಇಡಿ ಮೂಲಕ ತೋರಿಸಲಾಗಿತ್ತು.
ಇಂದು ಬೆಳಗ್ಗೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ನರೇಂದ್ರ ಸಿಂಗ್ ಥೋಮರ್ ಮಾತುಕತೆ ನಡೆಸಿದ್ದರು. ಈ ಸಭೆಯಲ್ಲಿ ಪ್ರತಿಭಟನಾ ನಿರತ ರೈತರ ಜೊತೆ ಸಂಧಾನದ ಮಾತುಕತೆ ಬಗ್ಗೆ ಚರ್ಚಿಸಲಾಗಿತ್ತು.
ಕೇಂದ್ರ ಸರ್ಕಾರ ಅಹಂಕಾರ ಬಿಟ್ಟು ರೈತರ ಸಮಸ್ಯೆಯನ್ನು ಆಲಿಸಬೇಕು ಎಂದು ಕೇಂದ್ರಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಏಟು ಕೊಟ್ಟಿದ್ದಾರೆ. ರೈತರಿಗೆ ನ್ಯಾಯ ಒದಗಿಸಿದರೆ ಮಾತ್ರ ಅವರ ಋಣ ತೀರಿಸಲು ಸಾಧ್ಯವೇ ವಿನಃ ರೈತರ ಮೇಲೆ ಲಾಠಿ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯ ಎಸಗುವುದಲ್ಲ ಎಂದು ಸಲಹೆ ಕೊಟ್ಟಿದ್ದಾರೆ. ಈ ಮಧ್ಯೆ, ಭಾರತದ ರೈತರ ಪ್ರತಿಭಟನೆ ಬಗ್ಗೆ ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್, ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ನಿಮ್ಮ ಕಳವಳ ಅನಪೇಕ್ಷಿತ ಮತ್ತು ಅನಗತ್ಯ ಅಂತ ಹೇಳಿದೆ.