ಧಾರವಾಡ: ದೆಹಲಿಯಲ್ಲಿ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೈತಪರ ಯೋಜನೆ ತರುತ್ತಿದ್ದಾರೆ. ರೈತರ ಹೋರಾಟ ಹರಿಯಾಣ ಮತ್ತು ಪಂಜಾಬ್ ಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಮಾಡುವ ಪ್ರಯತ್ನ ನಡೆದಿದೆ. ನಮ್ಮ ರಾಜ್ಯದಲ್ಲಿ ಯಾವ ರೈತರು ಸಹ ಕಾನೂನು ಬೇಡ ಎಂದಿಲ್ಲ. ಹಿಂದಿನ ಯಾವ ಸರ್ಕಾರ ಕೊಡದಷ್ಟು ನೆರವು ನಮ್ಮ ಸರ್ಕಾರ ರೈತರಿಗೆ ನೀಡುತ್ತಿದೆ. ರೈತರ ಹಿತಾಸಕ್ತಿಗಾಗಿ ಸರ್ಕಾರ ಒಳ್ಳೆ ಕೆಲಸ ಮಾಡಲಾಗುತ್ತಿದೆ. ಇಂತಹ ವೇಳೆ ಪ್ರತಿಪಕ್ಷ ನೈತಿಕ ಬೆಂಬಲ ಕೊಡಬೇಕಿತ್ತು, ಆದರೆ ಬೆಳಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡುತ್ತಿದ್ದಾರೆ ಎಂದರು.
ಮೋದಿ ಪಾರದರ್ಶಕ ಆಡಳಿತ ಕೊಡುತ್ತಿದ್ದಾರೆ. ಕಾಂಗ್ರೆಸಿಗೆ ವಿರೋಧಿಸಲು ವಿಷಯ ಇಲ್ಲದ ಕಾರಣ ಈ ಹೋರಾಟಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಯಾವುದೇ ಕಾಯಿದೆಯನ್ನು ಒತ್ತಾಯದಿಂದ ಹೇರಲಾಗುತ್ತಿಲ್ಲ. 20-30 ವರ್ಷ ಆಡಳಿತ ಮಾಡಿದವರು ರೈತರಿಗೆ ಏನು ಮಾಡಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪ್ರಚೋದನೆ ಕೊಟ್ಟು ಹೋರಾಟಕ್ಕೆ ಹಚ್ಚಿದೆ. ಕಾಂಗ್ರೆಸ್ ನಿರುದ್ಯೋಗಿ ಆಗಿದೆ. ನಿಜವಾಗಿ ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ಆದರೆ ನಿದ್ದೆ ಮಾಡುವಂತೆ ನಾಟಕ ಮಾಡುವವರನ್ನು ಎಬ್ಬಿಸಲು ಆಗುವುದಿಲ್ಲ ಎಂದು ಹೇಳಿದರು.