ಬೆಂಗಳೂರು: ಬ್ರಾಹ್ಮಣರಿಗೆ ಸಂಬಂಧಿಸಿದ ವಿವಾದಿತ ದೃಶ್ಯಗಳನ್ನು ಕತ್ತರಿಸಲು ಪೊಗರು ಟೀಮ್ ನಿರ್ಧರಿಸಿದ್ದು, ಸಿನಿಮಾ ನಿರ್ದೇಶಕ ನಂದಕಿಶೋರ್ ಸಹ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಬ್ರಾಹ್ಮಣ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಹಾಗೂ ನಿರ್ಮಾಪಕ ಬಿ.ಕೆ.ಗಂಗಾಧರ್ ಮಾತನಾಡಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರೊಂದಿಗೆ ಸಿನಿಮಾ ತಂಡದವರು ಅರವಿಂದ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
Advertisement
Advertisement
ಚಿತ್ರದಲ್ಲಿನ 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.
Advertisement
ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ ಸಮುದಾಯವರು ಆಗ್ರಹಿಸಿದ್ದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದರು.
Advertisement
ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಲಾಗಿತ್ತು.
ಪೊಗರು ಸಿನಿಮಾದ ವಿರುದ್ಧ ಇಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದ್ದು, ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಲಾಗಿತ್ತು.
ಪೊಗರು ನಿರ್ಮಾಪಕ ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಪೊಗರು ಸಿನಿಮಾ ಸೆನ್ಸಾರ್ ಆಗಿದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು. ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನು ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು. ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ. ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ ಕಾಲ ಅವಕಾಶ ಬೇಕು ಎಂದು ಹೇಳಿದ್ದರು.