ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ದೂರದರ್ಶನ ಚಂದನಾ ವಾಹಿನಿಯಲ್ಲಿ ನವೆಂಬರ್23 ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ಕೋವಿಡ್-19 ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ನಿರಂತರತೆಗಾಗಿ ಸಂವೇದಾ ತರಗತಿಗಳನ್ನು 5, 6 ಮತ್ತು 7ನೇ ತರಗತಿಗಳಿಗೂ ವಿಸ್ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಡಿ. 25 ರವರೆಗೆ 5 ವಾರಗಳ ಕಾಲ ನಡೆಯಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯಕ್ರಮದ ಅನುಪಾಲನೆ ಮಾಡಲಿದ್ದಾರೆ. ಈ ಪಾಠಗಳ ಕುರಿತಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಮಕ್ಕಳಿಗೆ ತಲುಪುವಂತೆ ಹೆಚ್ಚಿನ ರೀತಿಯ ಪ್ರಚಾರ ಮಾಡಿ ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಸಂವೇದಾ ತರಗತಿಗಳು 8, 9 ಮತ್ತು 10ನೇ ತರಗತಿಗಳಿಗೆ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ.


