– ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ
ಚಾಮರಾಜನಗರ: ಆಕ್ಸಿಜನ್ ಸಿಗದೇ 24 ಮಂದಿ ದಾರುಣವಾಗಿ ಮೃತಪಟ್ಟ ದುರಂತದ ನಡುವೆ ಒಂದು ವಿಚಿತ್ರ ಘಟನೆ ಕೂಡ ನಡೆದಿದೆ.
ಹೌದು. ಆರೋಗ್ಯ ಇಲಾಖೆಯು ಬದುಕಿದ್ದರೂ ಸತ್ತಿದ್ದಾರೆಂದು ಸುಳ್ಳು ಮಾಹಿತಿ ನೀಡಿದೆ. ಮಾಹಿತಿ ದೊರೆಯುತ್ತಿದ್ದಂತೆ ಮಹಿಳೆಯ ಕುಟುಂಬ ದುಃಖತಪ್ತವಾಗಿದೆ.
ಚಾಮರಾಜನಗರ ತಾಲೂಕು ಲಿಂಗನಪುರ ಗ್ರಾಮದ ಮಂಗಳಮ್ಮ (59) ಭಾನುವಾರ ಕೋವಿಡ್ ಪಾಸಿಟಿವ್ ಆಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಬಸವ ರಾಜೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿ ನಂತರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ರಾತ್ರಿ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ಬೆಳಗ್ಗೆ ಮಾಹಿತಿ ನೀಡಿದೆ.
ಮಂಗಳಮ್ಮ ತೀರಿಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಕುಟುಂಬಸ್ಥರು ಕಂಗಾಲಾಗಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇತ್ತ ಎಷ್ಟು ಹೊತ್ತಾದರು ಶವ ನೀಡದ ಕಾರಣ ಮಂಗಳಮ್ಮ ಪುತ್ರ ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಒಳಗೆ ವೆಂಟಿಲೇಟರ್‍ನಲ್ಲಿ ಜೀವಂತವಾಗಿದ್ದ ತಾಯಿ ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತ ಮಂಗಳಮ್ಮ ಬದುಕಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ತೆಗೆದಿದ್ದ ಸಮಾಧಿಗೆ ಕೋಳಿ ಹಾಕಿ ಗ್ರಾಮಸ್ಥರು ಸಮಾಧಿ ಮುಚ್ಚಿದ ಪ್ರಸಂಗ ನಡೆದಿದೆ.