ಬೆಳಗಾವಿ/ಚಿಕ್ಕೋಡಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡುವುದು ಸರಿಯಲ್ಲ. ಪಟಾಕಿಯಿಂದಲೇ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಆಚರಣೆಗಳು ನಡೆಯುವ ಕಾರಣ ಪಟಾಕಿಯನ್ನು ಬ್ಯಾನ್ ಮಾಡಬಾರದು. ಪಟಾಕಿಯಿಂದ ಮಾತ್ರ ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ ಎಂಬುದು ಸುಳ್ಳು. ಇವತ್ತು ವಾಹನಗಳಿಂದ ಎಷ್ಟು ಪರಿಸರ ಮಾಲಿನ್ಯ ಆಗುತ್ತಿದೆ ಅದನ್ನು ಯಾರು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಈಗ ಕಾನೂನು ಜಾರಿಗೆ ಮಾಡಲು ಮುಂದಾಗಿರುವವರು ಒಮ್ಮೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದರೆ ಉತ್ತಮ. ಏಕೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ನೀವು ಎಷ್ಟು ಪರಿಸರವನ್ನು ನಾಶ ಮಾಡುತ್ತಿದ್ದೀರಿ ಎಂಬುವುದು ಅರಿವಾಗುತ್ತದೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಗಣೇಶ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
Advertisement
Advertisement
ಇದೇ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಕೊಲೆ ಆರೋಪದಲ್ಲಿ ಜೈಲಿಗೆ ಹೋದರೆ ಆ ಜಾತಿ ಅವರು ನಮ್ಮವರು ಅನ್ನೋದು ಸರಿಯಲ್ಲ. ಕಾನೂನು ಪ್ರಕಾರ ಅಪರಾಧಿ ನಿರಪರಾಧಿ ಅನ್ನೋದು ಸಾಬೀತಾಗಲಿ. ಪ್ರಾರಂಭದಲ್ಲಿ ಆರೋಪಿಗಳು ನಮ್ಮವರು ಅನ್ನೋದು ಅನೈತಿಕತೆ. ಭ್ರಷ್ಟಾಚಾರಕ್ಕೆ ಬೆಂಬಲ ಸೂಚಿಸದಂತಾಗುತ್ತದೆ. ಈ ಬಗ್ಗೆ ಪಂಚಮಸಾಲಿ ಸ್ವಾಮೀಜಿ ಗಂಭೀರವಾಗಿ ಯೋಚಿಸಬೇಕು. ಖಾವಿ ಬಟ್ಟೆ ಹಾಕಿರುವ ನೀವು ಒಂದು ಜಾತಿಗೆ ಸಿಮೀತ ಅಲ್ಲ. ಬಂಧನವಾದ ಕೂಡಲೇ ಬೆಂಬಲ ಕೊಡುವುದರಿಂದ ತಪ್ಪು ಸಂದೇಶ ರವಾನೆ ಆಗುತ್ತದೆ. ಆಧಾರ ಇರುವ ಕಾರಣ ಸಂಶಯದಿಂದ ವಿನಯ ಕುಲಕರ್ಣಿ ಬಂಧಿಸಿದ್ದಾರೆ. ವಿನಯ್ ಕುಲಕರ್ಣಿ ಅವರ ಪರವಾಗಿ ನಿಂತಿದ್ದು ನಿಮ್ಮ ಮಠದ ಶೋಭೆ ಅಲ್ಲ ಎಂದು ಪಂಚಮಸಾಲಿ ಪೀಠದ ಸ್ವಾಮೀಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ನಾಡದ್ರೋಹಿ ಎಂಇಎಸ್ ಮಾಜಿ ಶಾಸಕರ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ಪಕ್ಷದಲ್ಲಿ ನೈತಿಕತೆ ಅನ್ನೋದು ಇಲ್ಲ. ಸೋನಿಯಾ ಗಾಂಧಿ, ಸಿದ್ದರಾಮಯ್ಯ ಬಂದರೂ ಬಿಜೆಪಿ ಸೇರ್ಪಡೆ ಮಾಡಿಕೊಳ್ಳುತ್ತಾರೆ. ಬಿಜೆಪಿ ಅವರಿಗೆ ಅಧಿಕಾರ ಮಾತ್ರ ಬೇಕಾಗಿದೆ. ಪ್ರಮಾಣಿಕರಿಗೆ, ಹೋರಾಟಗಾರರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಬಿಜೆಪಿ ವಿರುದ್ಧ ಕೆಂಡ ಕಾರಿದರು.