– ಜಿಲ್ಲಾಡಳಿತ ಎಚ್ಚರಿಕೆ ಧಿಕ್ಕರಿಸಿ ಹೊರ ಬಂದ ನಡುಗಡ್ಡೆ ಜನ
ರಾಯಚೂರು: ದಿನಸಿ ತರಲು ತೆಲಂಗಾಣಕ್ಕೆ ತೆರಳಿದ್ದ ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆ ಗ್ರಾಮದ 13 ಜನ ಮರಳಿ ಬರುವಾಗ ತೆಪ್ಪ ಮುಗುಚಿ ಬಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ. ಕುರ್ವಾಕಲಾ ಗ್ರಾಮದ ಪಾರ್ವತಿ (55) ನರಸಮ್ಮ (36) ಸುಮಲತಾ (32) ಪೂಜಾ (10) ನಾಪತ್ತೆಯಾದವರು. ತೆಲಂಗಾಣದ ಪಂಚಪಾಡಕ್ಕೆ ದಿನಸಿ ಖರೀದಿಗೆ ಹೋಗಿದ್ದ ನಾಲ್ವರು ಅಗತ್ಯ ವಸ್ತುಗಳನ್ನ ಖರೀದಿಸಿ ಮರಳುವಾಗ ಘಟನೆ ನಡೆದಿದೆ. 13 ಜನರಲ್ಲಿ 9 ಜನ ಈಜಿ ದಡ ಸೇರಲು ಹರಸಾಹಸ ಪಡುತ್ತಿದ್ದಾಗ ದಡದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕೂಡಲೇ ತೆಪ್ಪದಲ್ಲಿ ತೆರಳಿ 9 ಜನರನ್ನ ರಕ್ಷಿಸಿದ್ದಾರೆ. ಆದರೆ ತಾಯಿ ಸುಮಲತಾ ಮಗಳು ರೋಜಾ ಸೇರಿ ನಾಲ್ಕು ಜನ ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಯಾಪಲದಿನ್ನಿ ಪೋಲೀಸರು ನದಿ ದಡಕ್ಕೆ ತೆರಳಿದರಾದ್ರೂ ರಕ್ಷಣಾ ಕಾರ್ಯ ಸಾಧ್ಯವಾಗಿಲ್ಲ. ತೆಲಂಗಾಣದ ಮಕ್ತಲ್ ಠಾಣೆ ಪೊಲೀಸರು, ಅಲ್ಲಿನ ತೆಪ್ಪ ನಡೆಸುವವರು ಕೂಡಲೇ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ. ಆದರೆ ಮೂವರು ಮಹಿಳೆಯರು ಹಾಗೂ ಓರ್ವ ಬಾಲಕಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಹಾಗೂ ಎನ್ ಡಿ ಆರ್ ಎಫ್ ತಂಡ ತೆಲಂಗಾಣಕ್ಕೆ ತೆರಳಿದ್ದು ಬೆಳಿಗ್ಗೆಯಿಂದ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ನಾರಾಯಣಪುರ ಜಲಾಶಯದಿಂದ ಸದ್ಯ 2 ಲಕ್ಷ 80 ಸಾವಿರ ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿಬಿಡಲಾಗುತ್ತಿದ್ದು ನದಿ ಪಾತ್ರಕ್ಕೆ ತೆರಳದಂತೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಸಿತ್ತು. ಅಷ್ಟಾದ್ರೂ ನಡುಗಡ್ಡೆ ಜನ ತೆಪ್ಪಗಳ ಮೂಲಕ ಅಗತ್ಯ ವಸ್ತುಗಳಿಗಾಗಿ ಹೊರಬರುತ್ತಲೇ ಇದ್ದಾರೆ. ರಾಯಚೂರು ತಾಲೂಕಿನಲ್ಲಿ ಮೂರು ನಡುಗಡ್ಡೆಗಳಿದ್ದು ಒಟ್ಟು 298 ಕುಟುಂಬಗಳಿಂದ 945 ಜನ ವಾಸವಾಗಿದ್ದಾರೆ. ಇಲ್ಲಿನ ಜನರಿಗೆ ಈಗಾಗಲೇ ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನ ಮಾಡಿದ್ದರು ಜನ ನಡುಗಡ್ಡೆಯಲ್ಲೇ ವಾಸವಾಗಿದ್ದಾರೆ. ಅಲ್ಲದೆ ಪ್ರವಾಹದ ವೇಳೆ ತುಂಬಿ ಹರಿಯುವ ನದಿಯಲ್ಲಿ ತೆಪ್ಪದಲ್ಲಿ ಹೆಚ್ಚು ಜನ ಪ್ರಯಾಣ ಮಾಡುತ್ತಾರೆ. ದುರಾದೃಷ್ಟವಶಾತ್ ತೆಪ್ಪ ಮುಗುಚಿ ಬಿದ್ದಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ.
ಇನ್ನೂ ನಡುಗಡ್ಡೆಗಳಿಗೆ ಡೊಂಗರಾಂಪುರದಿಂದ ಕುರ್ವಕಲ ಹಾಗೂ ಆತ್ಕೂರಿನಿಂದ ಕುರ್ವಾಕುರ್ದಕ್ಕೆ ಎರಡು ಸೇತುವೆಗಳ ಕಾಮಗಾರಿಗಳು ಆರಂಭವಾಗಿ ದಶಕಗಳೇ ಕಳೆದರು ಪೂರ್ಣಗಿಲ್ಲ. ಹೀಗಾಗಿ ನಡುಗಡ್ಡೆಯ ಜನ ಪ್ರತಿಯೊಂದಕ್ಕೂ ತೆಪ್ಪವನ್ನೆ ಅವಲಂಬಿಸಿದ್ದಾರೆ. ಪ್ರವಾಹದ ಸಮಯದಲ್ಲೂ ಜಿಲ್ಲಾಡಳಿತದ ಎಚ್ಚರಿಕೆಯನ್ನ ದಿಕ್ಕರಿಸಿ ತೆಪ್ಪದಲ್ಲಿ ಓಡಾಡುತ್ತಿರುವುದು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಕೃಷ್ಣ ಪ್ರವಾಹದಲ್ಲಿ ನಾಪತ್ತೆಯಾಗಿರುವ ನಾಲ್ವರಿಗಾಗಿ ಬೆಳಗ್ಗೆ ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ ಹಾಗೂ ರಾಜ್ಯ ಮತ್ತು ತೆಲಂಗಾಣ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.