– 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳಿಗೆ ಅನುಮತಿ
– ಮೂರು ವರ್ಷಕ್ಕೆ ಅಧಿಸೂಚನೆ ಅನ್ವಯ
ಬೆಂಗಳೂರು: ದಿನದ 24 ಗಂಟೆ ಅಂಗಡಿ ತೆರೆಯಲು ಸರ್ಕಾರ ಅವಕಾಶ ನೀಡಿದ್ದು, 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Advertisement
ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷ ಈ ಅಧಿಸೂಚನೆ ಅನ್ವಯವಾಗಲಿದೆ. ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಅದನ್ನು ಅಂಗಡಿಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ರಜೆ ಹಾಗೂ ವಾರದ ರಜೆಯಲ್ಲಿರುವ ಉದ್ಯೋಗಿಯ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶನ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement
Advertisement
ಕಾರ್ಮಿಕರ ಸಂಬಳ ಮತ್ತು ಹೆಚ್ಚುವರಿ ಅವಧಿಯ ಭತ್ಯೆಯನ್ನು 1963ರ ಸಂಬಳ ಮತ್ತು ಭತ್ಯೆ ಕಾಯ್ದೆ ಅನ್ವಯ ನೀಡಬೇಕು. ಪ್ರತಿಯೊಬ್ಬ ಕಾರ್ಮಿಕರಿಗೆ 8 ಗಂಟೆ ಅವಧಿಗೆ ಮೀರಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಅವಧಿಯೂ ಗರಿಷ್ಠ 2 ಗಂಟೆ ಮೀರುವಂತಿಲ್ಲ. ಮೂರು ತಿಂಗಳಲ್ಲಿ 50 ಗಂಟೆ ಹೆಚ್ಚುವರಿ ಅವಧಿ ಮೀರುವಂತಿಲ್ಲ ಎಂದು ಸೂಚಿಸಿದೆ.
Advertisement
ಕಾರ್ಮಿಕರನ್ನು ರಜೆಯ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ನಿರ್ಧಿಷ್ಠ ಸೂಚನೆ ಇಲ್ಲದೇ ಹೆಚ್ಚುವರಿ ಅವಧಿ ಕೆಲಸ ಮಾಡಿಸುವುದು ಕಂಡು ಬಂದರೆ ಅಂತಹ ಅಂಗಡಿ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಸಂದರ್ಭದಲ್ಲಿ ರಾತ್ರಿ 8 ಗಂಟೆ ನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖಿತ ಒಪ್ಪಿಗೆ ನೀಡಿದರೆ ರಾತ್ರಿ 8 ರಿಂದ ಬೆಳಗಿನ 6 ಗಂಟೆಯ ತನಕ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಒದಗಿಸಬಹುದು.
ಎಲ್ಲ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಂಗಡಿಯ ಬೋರ್ಡ್‍ನಲ್ಲಿ ಮಾಹಿತಿ ಪ್ರದರ್ಶನ ಮಾಡಬೇಕು. ಅಂಗಡಿ ಮಳಿಗೆಗಳಲ್ಲಿ ಕಾರ್ಮಿಕರಿಗೆ ಅಗತ್ಯ ಶೌಚಾಲಯ, ವಿಶ್ರಾಂತಿ ಕೊಠಡಿ, ಸೇಫ್ಟಿ ಲಾಕರ್ ಒದಗಿಸಬೇಕು. ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಅಂಗಡಿ ಮಳಿಗೆಗಳು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ದೂರು ಸಲ್ಲಿಸಲು ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿ ಸಕ್ರೀಯವಾಗಿರುವಂತೆ ನೋಡಿಕೊಳ್ಳಬೇಕು.
ಈ ನಿಯಮಗಳ ಉಲ್ಲಂಘನೆ ಮಾಡುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ವಿರುದ್ದ 1961 ವಾಣಿಜ್ಯ ಅಂಗಡಿಗಳು ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.