– ಸೇಲಂನ ಪುಟ್ಟ ಹಳ್ಳಿಯಲ್ಲಿ ಜನಿಸಿದ ನಟರಾಜನ್ ಕ್ರಿಕೆಟ್ ಜೆರ್ನಿ
– 3 ತಂಗಿಯರನ್ನು ಓದಿಸುವ ಕನಸು ಕಟ್ಟಿರುವ ಯುವ ಕ್ರಿಕೆಟಿಗ
ಚೆನ್ನೈ: ನಮ್ಮ ಬಳಿ ಟ್ಯಾಲೆಂಟ್ ಮತ್ತು ಸಾಧಿಸುವ ಮನಸ್ಸು ಇದ್ದರೆ, ಅವಕಾಶ ತಾನಗಿಯೇ ಹುಡುಕಿಕೊಂಡು ಬರುತ್ತದೆ. ಈಗ ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್ ಅವರ ವಿಚಾರದಲ್ಲೂ ಅವಕಾಶ ಅವರನ್ನೇ ಹುಡುಕಿಕೊಂಡು ಬಂದಿದೆ.
ಐಪಿಎಲ್ ಎಂದರೆ ರಂಗುರಂಗಿನ ಕ್ರಿಕೆಟ್ ಹಬ್ಬ. ದುಡ್ಡಿನ ಹೊಳೆಯೇ ಹರಿಯುವ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಸರಿದೆ. ವಿದೇಶಿ ಆಟಗಾರರು ಕೂಡ ಈ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕರಾಗಿರುತ್ತಾರೆ. ಅಂತೆಯೇ ಈ ಕ್ರಿಕೆಟ್ ಲೀಗ್ ದೇಶೀಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ.
Advertisement
Advertisement
ಐಪಿಎಲ್‍ನಿಂದ ಹಲವಾರು ಯುವ ಆಟಗಾರರು ಹೊರಬಂದಿದ್ದು, ಈಗ ಚೆನ್ನೈನ ಸೇಲಂ ಜಿಲ್ಲೆಯ ಪುಟ್ಟ ಗ್ರಾಮ ಚಿನ್ನಪ್ಪಂಪಟ್ಟಿಯಲ್ಲಿ ಜನಿಸಿದ ತಂಗರಾಸು ನಟರಾಜನ್ ಇಂದು ಐಪಿಎಲ್‍ನಲ್ಲಿ ಯಾರ್ಕರ್ ಸ್ಪೆಶಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ನಟರಾಜನ್ ಅವರು 1991 ಮೇ 27 ರಂದು ಸೇಲಂನಲ್ಲಿ ಜನಿಸಿದ್ದರು. ಇವರ ತಂದೆ-ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. ಜೊತೆಗೆ ಇವರಿಗೆ ಮೂರು ಜನ ಸಹೋದರಿಯರು ಇದ್ದಾರೆ.
Advertisement
Advertisement
ಮೊದಲು ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಒಂದು ದಿನ ತಮಿಳುನಾಡು ಕ್ರಿಕೆಟ್ ಮೆಂಟರ್ ಜೈಪ್ರಕಾಶ್ ಅವರ ಕಣ್ಣಿಗೆ ಬಿದ್ದಿದ್ದರು. ಅಂದು ಜೈಪ್ರಕಾಶ್ ಅವರು ಅವರನ್ನು ಕರೆತಂದು ವೈಟ್ ಬಾಲ್ ಕ್ರಿಕೆಟ್ ಅಭ್ಯಾಸ ಮಾಡಿಸಿದ್ದರು. ಈ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ನಟರಾಜನ್ ಒಂದು ಮಟ್ಟದ ಯಶಸ್ಸು ಕಂಡಿದ್ದರು. ಅಂದು ನಟರಾಜನ್ ಆಡುತ್ತಿದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಮುತ್ತಯ್ಯ ಮುರುಳೀಧರನ್ ನಟರಾಜನ್ ಅವರಿಗೆ ಉತ್ತಮವಾಗಿ ತರಬೇತಿ ನೀಡಿದ್ದರು.
ಟಿಎನ್‍ಪಿಎಲ್‍ನಲ್ಲಿ ಮಿಂಚಿದ ನಟರಾಜನ್ ಅವರು, ನಂತರ ತಮಿಳುನಾಡು ಕ್ರಿಕೆಟ್ ತಂಡಕ್ಕೆ ಎಂಟ್ರಿಕೊಟ್ಟು, ದೇಶೀಯ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ 2017ರಲ್ಲಿ ಒಂದು ಬ್ಯಾಟ್ ಕೊಳ್ಳಲು ಹಣವಿಲ್ಲದೇ ಇದ್ದ ನಟರಾಜನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ ಮೂರು ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ 2017ರ ಐಪಿಎಲ್‍ನಲ್ಲಿ ದುಬಾರಿಯಾಗಿದ್ದ ನಟರಾಜನ್ ತಾವು ಆಡಿದ ಆರು ಪಂದ್ಯದಲ್ಲಿ 9.07 ಎಕಾನಮಿ ರೇಟ್ ಹೊಂದಿದ್ದರು.
ಇದಾದ ನಂತರ ಪಂಜಾಬ್ ತಂಡ ಇವರನ್ನು ಕೈಬಿಟ್ಟಿತ್ತು. ಆದರೆ 2018ರ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಮಿಂಚಿದ್ದ ನಟರಾಜನ್ ತಮಿಳುನಾಡು ತಂಡ ಫೈನಲ್‍ಗೆ ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಕಂಡ ಸನ್‍ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರುಳೀಧರನ್ 2018 ಐಪಿಎಲ್ ಹಾರಾಜು ಪ್ರಕ್ರಿಯೆಯಲ್ಲಿ 40 ಲಕ್ಷ ನೀಡಿ ನಟರಾಜನ್ ಅವರನ್ನು ಖರೀದಿಸಿದ್ದರು.
ಈ ಹಿಂದೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ನಟರಾಜನ್, ನನ್ನ ತಂಗಿಯರಿಗೆ ಉತ್ತಮ ಶಿಕ್ಷಣ ಕೊಡಸಬೇಕು. ಅವರಿಗೆ ಶಿಕ್ಷಣ ಕೊಡಿಸುವುದು ನಾನು ದುಬಾರಿ ಕಾರು ತೆಗೆದುಕೊಳ್ಳುವುದಕ್ಕಿಂತ ದೊಡ್ಡದು. ಅವರ ಜೀವನಕ್ಕೆ ಉತ್ತಮ ದಾರಿಯನ್ನು ಮಾಡಿಕೊಡಬೇಕು. ಜೊತೆಗೆ ನನ್ನ ಹಾಗೇ ಉತ್ತಮ ಟೆನ್ನಿಸ್ ಕ್ರಿಕೆಟ್ ಆಡುವ ಆಟಗಾರಿಗೆ ಸಹಾಯ ಮಾಡಬೇಕು. ಒಂದು ಮನೆಯನ್ನು ಕಟ್ಟಬೇಕು ಎಂದು ಹೇಳಿಕೊಂಡಿದ್ದರು.
ಇಂದು ಅದೇ ನಟರಾಜನ್ ಐಪಿಎಲ್‍ನಲ್ಲಿ ಯಾರ್ಕರ್ ಸ್ಪೆಶಲಿಸ್ಟ್ ಆಗಿ ಮಿಂಚುತ್ತಿದ್ದಾರೆ. ನಿನ್ನೆ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 10 ಯಾರ್ಕರ್ ಎಸೆದು ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ ಒಂದು ಇನ್ನಿಂಗ್ಸ್‍ನಲ್ಲಿ ಅತೀ ಹೆಚ್ಚು ಯಾರ್ಕರ್ ಎಸೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ನಿನ್ನೆಯ ಪಂದ್ಯದಲ್ಲಿ ಪ್ರಮುಖ 17ನೇ ಓವರ್ ಬೌಲ್ ಮಾಡಿದ ನಟರಾಜನ್ ಕೇವಲ 7 ರನ್ ನೀಡಿ ಒಂದು ವಿಕೆಟ್ ಗಬಳಿಸಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದ್ದರು.