ದಾಹ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದ ಗ್ರಾಮಸ್ಥರು – 4 ಕೆರೆಗಳು ಭರ್ತಿ

Public TV
1 Min Read
GDG 3

ಗದಗ: ಒಂದು ಕಾಲದಲ್ಲಿ ಅಲ್ಲಿ ಬರ ತಾಂಡವಾಡ್ತಿತ್ತು. ಜನ-ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುತ್ತಿದ್ದವು. ಇಡೀ ಊರಿಗೆ ಊರೆ ದಾಹ ನೀಗಿಸಿಕೊಳ್ಳಲು ಹಾತೊರೆಯುತ್ತಿತ್ತು. ಅಲ್ಲಿರುವ ಕೆರೆಗಳನ್ನ ತುಂಬಿಸಿಕೊಡಿ ಅಂತ ಗ್ರಾಮಸ್ಥರು ಸರ್ಕಾರಕ್ಕೆ ಸಾಕಷ್ಟು ಬಾರಿ ಬೇಡಿಕೊಂಡರು ಪ್ರಯೋಜನವಾಗಿರಲಿಲ್ಲ. ಕೊನೆಗೆ ತಾವೇ ದಾಹ ನೀಗಿಸಿಕೊಳ್ಳಲು ಮುಂದಾದರು. ಯಾವ ಸರ್ಕಾರಗಳೂ ಮಾಡದ ಕೆಲಸವನ್ನ ತಾವೇ ಮಾಡಲು ಮುಂದಾದರು.

GDG 5

ಹೌದು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಕೆರೆಗಳಲ್ಲಿ ನೀರು ತುಂಬಿದೆ. ನರೇಗಲ್ ಸುತ್ತ-ಮುತ್ತ ನದಿ ಮೂಲಗಳು ಇಲ್ಲದೇ ಇರುವುದರಿಂದ ಕೆರೆಗಳು ಬರಿದಾಗಿದ್ದವು. ಹೀಗಾಗಿ ಗ್ರಾಮದಲ್ಲಿನ ಜನ ನೀರಿಗಾಗಿ ಪರದಾಡುತ್ತಿದ್ದರು. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸ್ಥಳೀಯರು ಸಾಕಷ್ಟು ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಸರ್ಕಾರದ ಯಾವ ನಿರೀಕ್ಷೆ ಇಟ್ಟುಕೊಳ್ಳದೆ, ಸ್ಥಳೀಯರು ಒಟ್ಟಾಗಿ ಖರ್ಚು ಮಾಡಿ ಗ್ರಾಮದ ನಾಲ್ಕು ಕೆರೆಗಳ ಹೂಳು ತೆಗೆದು ನೀರು ಬರುವಂತೆ ಮಾಡಿದ್ದಾರೆ. ಈ ವರ್ಷ ನಿರಂತರ ಮಳೆಯಿಂದ ನಾಲ್ಕು ಕೆರೆಗಳು ಭರ್ತಿಯಾಗಿದ್ದು, ಸ್ಥಳೀಯರಲ್ಲಿ ಮಂದಹಾಸ ಮೂಡಿಸಿದೆ.

GDG 6

ನೀರಿಗಾಗಿ ಹಾಹಾಕಾರ ಪಡುತ್ತಿದ್ದ ನರೇಗಲ್ ಜನ ತಾವೇ, ನೆಲಜಲ ಸಂರಕ್ಷಣಾ ಸಮಿತಿ ಅಂತ ತಂಡ ಮಾಡಿಕೊಂಡರು. ಇದೇ ತಂಡದಿಂದ ಹೂಳೆತ್ತುವ ಕೆಲಸ ಮಾಡಿದ್ದರಿಂದ ಇಂದು ಜೀವಜಲ ಎಲ್ಲೆಂದರಲ್ಲಿ ಹರಿಯುತ್ತಿದೆ. ಕೆರೆಗಳು ಭರ್ತಿಯಾಗಿದ್ದರಿಂದ ಸದ್ಯ ಗ್ರಾಮದಲ್ಲಿ ಈ ಹಿಂದೆ ಉದ್ಭವಿಸಿದ್ದ ನೀರಿನ ಸಮಸ್ಯೆ ಇಂದು ಇಲ್ಲ. ಬೋರ್‍ವೆಲ್‍ಗಳು ರಿಚಾರ್ಜ್ ಆಗಿವೆ. ಜೊತೆಗೆ ಕೆರೆ ಸುತ್ತಲೂ ಗಿಡಗಳನ್ನ ನೆಡಲಾಗಿದೆ. ಮುಂದೊಂದು ದಿನ ಗಿಡಮರಗಳು ಚೆನ್ನಾಗಿ ಬೆಳೆದು ಶುದ್ಧ ಗಾಳಿ ಜೊತೆಗೆ ಮಳೆ ಬರುವಂತಾಗಲೆಂದು ಹಸಿರು ನಿರ್ಮಿಸಿದೆ. ಕೆರೆ ತುಂಬಿರುವುದು ತುಂಬಾನೆ ಖುಷಿಯಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

GDG 2

ಗದಗ ಜಿಲ್ಲೆ ನರಗೇಲ್ ಭಾಘದಲ್ಲಿ ರೈತರಿಗೂ ಸಾಕಷ್ಟು ಜಾಗೃತಿ ಮೂಡಿಸಲಾಗ್ತಿದೆ. ಜಮೀನುಗಳಲ್ಲಿಯೂ ಹೊಂಡಗಳನ್ನ ನಿರ್ಮಿಸಿ ಅಂತರ್ಜಲ ವೃದ್ಧಿಗೆ ಮುಂದಾಗುತ್ತಿದ್ದಾರೆ. ತಾವೇ ತಮ್ಮ ದಾಹ ನೀಗಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಒಟ್ಟಾರೆ ಯಾವ ಸರ್ಕಾರಗಳೂ ಸಹ ಮುತುವರ್ಜಿಯಿಂದ ಮಾಡದ ಕೆಲಸವನ್ನ ಸ್ಥಳೀಯರು ಮಾಡಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿದ್ದಾರೆ.

GDG 1

Share This Article
Leave a Comment

Leave a Reply

Your email address will not be published. Required fields are marked *