ದಾವಣಗೆರೆ: ಕುತುಹೂಲ ಕೆರಳಿಸಿದ್ದ ಮೇಯರ್, ಉಪಮೇಯರ್ ಚುನಾವಣೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಮೇಯರ್ ಆಗಿ ಪಾಲಿಕೆಯ 25ನೇ ವಾರ್ಡ್ ನ ಎಸ್.ಟಿ.ವೀರೇಶ್ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ 44ನೇ ವಾರ್ಡ್ ನ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಮೀಸಲಾಗಿದ್ದು, ಬಿಜೆಪಿಯಿಂದ 25ನೇ ವಾರ್ಡ್ ನ ಎಸ್.ಟಿ. ವೀರೇಶ್, ಕಾಂಗ್ರೆಸ್ ನಿಂದ 38ನೇ ವಾರ್ಡ್ ನ ಗಡಿಗುಡಾಳ ಮಂಜುನಾಥ ನಾಮಪತ್ರ ಸಲ್ಲಿಸಿದ್ದರು.
ಉಪಮೇಯರ್ ಸ್ಥಾನ ಎಸ್‍ಸಿ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದು, ಬಿಜೆಪಿಯಿಂದ 44ನೇ ವಾರ್ಡಿನ ಶಿಲ್ಪಾ ಜಯಪ್ರಕಾಶ್, ಕಾಂಗ್ರೆಸ್ ನಿಂದ 36ನೇ ವಾರ್ಡಿನ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು. ಬೆಳಗ್ಗೆ 11ಕ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರ 29, ಕಾಂಗ್ರೆಸ್ ಅಭ್ಯರ್ಥಿ ಪರ 22 ಮತ ಚಲಾವಣೆಗೊಂಡವು. ಬಿಜೆಪಿ 7 ಮತಗಳಿಂದ ಗೆಲುವು ಸಾಧಿಸಿ, ನಗೆಬೀರಿತು.
ಮತದಾನಕ್ಕೆ ಗೈರಾದ ಕಾರ್ಪೋರೇಟರ್: ಜಯಮ್ಮ ಗೋಪಿನಾಯ್ಕ (ಪಕ್ಷೇತರ), ನೂರ್‍ಜಹಾನ (ಜೆಡಿಎಸ್), ದೇವರಮನಿ ಶಿವಕುಮಾರ್ (ಕಾಂಗ್ರೆಸ್) ಗೈರಾಗಿದ್ದರು.
ಗೈರಾದ ಎಂಎಲ್‍ಸಿ, ಶಾಸಕರು : ಶಾಮನೂರು ಶಿವಶಂಕರಪ್ಪ, ಯು.ಬಿ. ವೆಂಕಟೇಶ್, ಕೆ.ಸಿ.ಕೊಂಡಯ್ಯ
ಪಕ್ಷೇತರ ಅಭ್ಯರ್ಥಿ ಜಯಮ್ಮ ಗೋಪಿನಾಯ್ಕ್ ಬಿಜೆಪಿ ಬೆಂಬಲಿಸಿದ್ದು, ಅನಾರೋಗ್ಯದ ಕಾರಣ ಮಣಿಪಾಲ್ ಗೆ ಹೋಗಿದ್ದರಿಂದ ಮತದಾನಕ್ಕೆ ಗೈರಾಗಿದ್ದಾರೆ. ಅಲ್ಲದೆ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಮತದಾನಕ್ಕೆ ಬಾರದೇ ಮನೆಯಲ್ಲಿ ಉಳಿದುಕೊಂಡದ್ದು, ಕಾಂಗ್ರೆಸ್ ಎಂಎಲ್ಸಿಗಳು ಗೈರಾಗಿದ್ದರಿಂದ ಬಿಜೆಪಿ ಗೆಲುವು ಸಾಧಿಸಲು ಸುಲಭವಾಯಿತು. ಆದರೂ ಕೂಡ ಕಾಂಗ್ರೆಸ್ ಪಕ್ಷದ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಕೈ ಎತ್ತಿ ಮತ ಚಲಾಯಿಸುವುದರ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಿದರು.
ಎಷ್ಟು ಮತದಾರರು : ಒಟ್ಟು ಮತದಾರರು 58 ಇದ್ದು, ಮೇಯರ್ ಸ್ಥಾನಕ್ಕೆ ಮ್ಯಾಜಿಕ್ ನಂಬರ್ 29 ಇತ್ತು. ಪಾಲಿಕೆಯಲ್ಲಿ ಒಟ್ಟು ಸದಸ್ಯರು 45 ಇದೆ. ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಪಾಲಿಕೆ ಸದಸ್ಯರು ಒಟ್ಟು 43 ಆಗಿದ್ದು, 20 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್ 5 ಪಕ್ಷೇತರ ಒಟ್ಟು 43 ಕಾರ್ಪೋರೇಟರ್ ಗಳು.
ಈ ಪೈಕಿ ಕಾಂಗ್ರೆಸ್ 20, ಪಕ್ಷೇತರ ಉದಯ್ ಕುಮಾರ್, ಮೋಹನ ಕೊಂಡಜ್ಜಿ 1 ಸ್ಥಾನ ಸೇರಿ ಒಟ್ಟು 22 ಮತಗಳು ಕಾಂಗ್ರೆಸ್ ಗೆ ಬಿದ್ದವು. ಬಿಜೆಪಿ ಪರ 1 ಸಂಸದ, 1 ಎಂಎಲ್‍ಎ, 7 ಎಂಎಲ್ಸಿ ಗಳು ಹಾಜರಾಗಿದ್ದರು. ಪಕ್ಷೇತರರ 4 ಸೇರಿ 30 ಸದಸ್ಯರ ಬಲವನ್ನು ಬಿಜೆಪಿ ಹೊಂದಿತ್ತು. ಕಾಂಗ್ರೆಸ್ ಕಾರ್ಪೋರೇಟರ್ ನಲ್ಲಿ ಅಸಮಾಧಾನ ಎದ್ದು ಕಾಣುತ್ತಿದ್ದು, ಕಾಂಗ್ರೆಸ್ ಕಾರ್ಪೋರೇಟರ್ ಹಾಗೂ ಮೇಯರ್ ಅಭ್ಯರ್ಥಿಯಾಗಿದ್ದ ದೇವರಮನಿ ಶಿವಕುಮಾರ್ ರಾತ್ರೋರಾತ್ರಿ ಬಿಜೆಪಿಗೆ ಬೆಂಬಲ ಸೂಚಿಸಿ ಸೇರ್ಪಡೆಯಾದ ಹಿನ್ನೆಲೆ ಕಾಂಗ್ರೆಸ್ ಕಾರ್ಪೋರೇಟರ್‍ಗಳಲ್ಲಿ ಅಸಮಧಾನ ಉಂಟಾಗಿತ್ತು. ಸೋಲಿನ ನಿರಾಸೆಯಲ್ಲಿರುವ ಕಾಂಗ್ರೆಸ್ ಕಾರ್ಪೋರೇಟರ್ ಗಳು ಮೌನ ತಾಳಿದ್ದರು. ಅಲ್ಲದೆ ಪಾಲಿಕೆ ಆವರಣದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ ಹೇರಲಾಗಿತ್ತಲ್ಲದೇ, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.