ಬೆಂಗಳೂರು: ಮಳೆಗಾಲ ಬರುತ್ತಿದ್ದಂತೆ ಪಾಲಿಕೆ ದುಡ್ಡು ಮಾಡಲು ರೆಡಿಯಾಗಿದೆ. ಅದರಲ್ಲೂ ರಾಜಕಾಲುವೆಗಳ ರಿಪೇರಿ, ನಿರ್ವಹಣೆ ಹೆಸರಲ್ಲಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಶಾಂತಿನಗರ ರಾಜಕಾಲುವೆ ತಡೆಗೋಡೆ ಪ್ರತಿ ವರ್ಷ ನಿರ್ವಹಣೆ ಹೆಸರಲ್ಲಿ ಒಡೆದು ಮತ್ತೆ ಕಟ್ಟುತ್ತಾರೆ. ಹಾಗಂತ ನೀರು ರಸ್ತೆಗೆ ಬರುವುದು, ಸಮಸ್ಯೆ ಆಗುವುದು ತಪ್ಪಿಲ್ಲ. ಬದಲಾಗಿ ರಸ್ತೆ ಮಧ್ಯೆ ಮಳೆ ಬಂದಾಗ ಕೆರೆ ಚಿತ್ರಣ ಇರುತ್ತದೆ. ಇಷ್ಟಾದ್ರೂ ಪಾಲಿಕೆ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಎಂಬ ಲೆಕ್ಕಚಾರದ ಪಟ್ಟಿ ಬಿಡುಗಡೆ ಮಾಡಿ ಪ್ರತಿ ವರ್ಷ ರಾಜಕಾಲುವೆ ಗೋಡೆ ಒಡೆದು ಕಟ್ಟುವ ಪ್ರಕ್ರಿಯೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಛಾಯಾ, ವಾಹನಗಳು ಮಳೆ ಬಂದಾಗ ಕೆಡುತ್ತದೆ, ಜನರ ತೆರಿಗೆ ಹಣ ಪ್ರತಿ ವರ್ಷ ಹಾಳು ಮಾಡದೇ ಒಂದು ಸೂಕ್ತ ಪ್ರಾಜೆಕ್ಟ್ ಯೋಜನೆ ತಯಾರಿ ಮಾಡಿದರೆ ಯಾವುದೇ ಅನಾಹುತಗಳು ಆಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪ್ರಸಕ್ತ ಮಳೆಗಾಲದ ತಯಾರಿ ಅಂತ ಶಾಂತಿನಗರದಲ್ಲಿ ಈಗ ಗೋಡೆ ಒಡೆದು ಕಟ್ಟುವ ಕಾರ್ಯ ಮುಂದುವರಿದಿದೆ.