-20 ಗಂಟೆಯಿಂದ ಆಹಾರವಿಲ್ಲದೇ ಗೋಳಾಟ
ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ.
Advertisement
ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ ರೈಲು ಹೊರಟಿತ್ತು. ಬೆಂಗಳೂರಿನಿಂದ 2,456 ಕಿಲೋ ಮೀಟರ್ ದೂರದಲ್ಲಿರೋ ಬಸ್ತಿಯನ್ನು ಈ ರೈಲು ತಲುಪಬೇಕಿತ್ತು. ಪ್ರವಾಸಿ ಕಾರ್ಮಿಕರು ಪ್ರಯಾಣಕ್ಕಾಗಿ 1,020 ರೂಪಾಯಿ (875 ರೈಲ್ವೇ ಚಾರ್ಜ್ + 145 ಬಸ್ ಚಾರ್ಜ್) ಪಾವತಿ ಮಾಡಿದ್ದರು. ಬೆಂಗಳೂರಿನಿಂದ ಹೊರಟ ರೈಲು ಸಿಕಂದರಾಬಾದ್, ನಾಗಪುರ, ಇಟಾರಸಿ, ಝಾಂಸಿ, ಕಾನ್ಪುರ ಮತ್ತು ಲಕ್ನೋ ಮಾರ್ಗವಾಗಿ ಬಸ್ತಿಗೆ ಹೋಗಬೇಕಿತ್ತು. ಇದು ಬರೋಬ್ಬರಿ 45 ಗಂಟೆಯ ಪ್ರಯಾಣವಿತ್ತು. ಆದ್ರೆ ಝಾಂಸಿಯಲ್ಲಿ ರೈಲು ಮಾರ್ಗ ಬದಲಿಸಿದ್ದರಿಂದ ಶನಿವಾರ ಸಂಜೆ ಗಾಜಿಯಾಬಾದ್ ತಲುಪಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸಿ ಕಾರ್ಮಿಕ, ರೂಟ್ ಮ್ಯಾಪ್ ಬದಲಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಶುಕ್ರವಾರ ರಾತ್ರಿ ನಾಗಪುರ ನಿಲ್ದಾಣದ ನಂತ್ರ ನಾವು ಆಹಾರವೇ ಸೇವಿಸಿಲ್ಲ ಎಂದಿದ್ದಾರೆ. ಇನ್ನು ಕಾರ್ಮಿಕರಿಗೆ ಟಿಕಟ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ ನರೇಂದ್ರ ಕುಮಾರ್ ಮಾತನಾಡಿ, ಟ್ರೈನ್ ಡೈವರ್ಟ್ ತೆಗೆದುಕೊಂಡಿದೆ ಎಂದು ಫೋನ್ ಬಂತು. ಪ್ರಯಾಣಿಕರು 20 ಗಂಟೆಯಿಂದ ಏನು ತಿಂದಿಲ್ಲ ಮತ್ತು ರೈಲು ಯಾವಾಗ ಬಸ್ತಿ ತಲುಪುತ್ತೆ ಎಂಬ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.
Advertisement
ಮಾರ್ಗ ಮಧ್ಯೆ ಸಿಲುಕಿರುವ ಪ್ರವಾಸಿ ಕಾರ್ಮಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಅವರನ್ನು ಬಸ್ತಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರಿನ ರೈಲ್ವೇ ಅಧಿಕಾರಿ (ಡಿಆರ್‍ಎಂ) ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.