ದಾದಾ ‘ಜೀವನದ ಅತ್ಯುತ್ತಮ ಕ್ಷಣ’ ರಿವೀಲ್

Public TV
2 Min Read
Sourav Ganguly Ok

ಮುಂಬೈ: ಟೀಂ ಇಂಡಿಯಾಗೆ ದಾದಾ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಡುಗೆ ಅಪಾರ. ಹೀಗಾಗಿ ದಾದಾ ಅನೇಕರ ಪಾಲಿನ ರಿಯಲ್ ಹೀರೋ ಕೂಡ ಹೌದು. ಸೌರವ್ ಗಂಗೂಲಿ ಸದ್ಯ ತಮ್ಮ ಅತ್ಯುತ್ತಮ ದಿನವನ್ನು ರಿವೀಲ್ ಮಾಡಿದ್ದಾರೆ.

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಸೌರವ್ ಗಂಗೂಲಿ ಅವರು 1996ರ ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಲಂಡನ್‍ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಡಿದ್ದರು. ಇದು ಅವರ ವೃತ್ತಿಜೀವನದ ಒಂದು ಅಪ್ರತಿಮ ಕ್ಷಣವಾಗಿದೆ. ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ತಮ್ಮ ಚೊಚ್ಚಲ ಇನ್ನಿಂಗ್ ನಲ್ಲಿ ಶತಕ ಬಾರಿಸಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ನೆನೆದು, “ಇಂದು ನನ್ನ ಚೊಚ್ಚಲ ಪಂದ್ಯವನ್ನು ಆಡಿದ್ದೆ. ಇದು ಜೀವನದ ಅತ್ಯುತ್ತಮ ಕ್ಷಣ” ಎಂದು ಟ್ವೀಟ್ ಮಾಡಿದ್ದಾರೆ. ಅವರ ಪತ್ನಿ ಡೋನಾ ಕೂಡ ಟ್ವೀಟ್ ಮಾಡಿ, “24 ವರ್ಷಗಳ ಹಿಂದೆ ಸೌರವ್ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರ ಬಗ್ಗೆ ತುಂಬಾ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ.

ಸೌರವ್ ಗಂಗೂಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ 301 ಎಸೆತಗಳನ್ನು ಎದುರಿಸಿ 131 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ಮೂಲಕ ಗಂಗೂಲಿ ಟೀಂ ಇಂಡಿಯಾಗೆ ತಮ್ಮ ಆಯ್ಕೆಯನ್ನು ದೃಢಪಡಿಸಿದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ 10ನೇ ಬ್ಯಾಟ್ಸ್‌ಮನ್ ಮತ್ತು  ಲಾರ್ಡ್ಸ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಸೌರವ್ ಪಾತ್ರರಾಗಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಸೌರವ್ 1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಆದಾಗ್ಯೂ ಅವರು ಕೇವಲ ಮೂರು ರನ್ ಗಳಿಸಿದ್ದರಿಂದ ಮುಂದಿನ ನಾಲ್ಕು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಆಡುವ ಇಲೆವೆನ್‍ನಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ. ಆದರೆ 1996 ಮೇ ತಿಂಗಳಿನಲ್ಲಿ ನಡೆಸಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಕಮ್‍ಬ್ಯಾಕ್ ಮಾಡಿದರು. ಮೇ 26ರಂದು ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಸೌರವ್ 46 ರನ್ ಗಳಿಸಿದ್ದರು.

47 ವರ್ಷದ ಸೌರವ್ ಗಂಗೂಲಿ ಟಿಂ ಇಂಡಿಯಾ ಪರ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 7,212 ರನ್ ಮತ್ತು 11,363 ರನ್ ಗಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *