ದಾಖಲೆಯ ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಹಿಟ್‍ಮ್ಯಾನ್ ರೋಹಿತ್

Public TV
1 Min Read
ind vs eng 5

ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಹಲವು ದಾಖಲೆಗಳ ಸರದಾರನಾಗಿ ಭಾರತಕ್ಕೆ ಆಸರೆಯಾಗಿದ್ದಾರೆ.

ind 2

ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಎರಡನೇ ಓವರ್‍ನಲ್ಲೇ ಆಘಾತ ಎದುರಾಯಿತು. ಆರಂಭಿಕ ಬ್ಯಾಟ್ಸ್‌ಮ್ಯಾನ್ ಶುಭ್ಮನ್ ಗಿಲ್ ಶೂನ್ಯಕ್ಕೆ ಔಟ್ ಆದರೆ, ನಂತರ ಬಂದ ಚೇತೇಶ್ವರ ಪೂಜಾರ 21 ರನ್‍ಗೆ ಸುಸ್ತಾದರು. ನಾಯಕ ಕೊಹ್ಲಿ ಶೂನ್ಯ ಸುತ್ತಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 4ನೇ ವಿಕೆಟ್‍ಗೆ ಜೊತೆಯಾದ ರೋಹಿತ್ ಮತ್ತು ಅಜಿಂಕ್ಯ ರಹಾನೆ 162 ರನ್ (310 ಬಾಲ್) ಜೊತೆಯಾಟವಾಡಿ ಭಾರತಕ್ಕೆ ಚೇತರಿಕೆ ನೀಡಿದರು.

ind 1 1

ರೋಹಿತ್ ಶರ್ಮಾ 161 ರನ್ (231 ಬಾಲ್, 18 ಬೌಂಡರಿ, 2 ಸಿಕ್ಸರ್) ಸಿಡಿಸಿ ತಮ್ಮ ಏಳನೇ ಶತಕದೊಂದಿಗೆ ಸಂಭ್ರಮಾಚರಿಸಿದರು. ಈ ಎಲ್ಲಾ ಏಳು ಶತಕಗಳು ಭಾರತದಲ್ಲೇ ಬಂದಿರುವುದು ವಿಶೇಷ ದಾಖಲೆಯಾಗಿದೆ. ಇದರೊಂದಿಗೆ ಇನ್ನೊಂದು ದಾಖಲೆಗೆ ಸಾಕ್ಷಿಯಾಗಿರುವ ರೋಹಿತ್ ಇಂಗ್ಲೆಂಡ್ ವಿರುದ್ಧ ಮೂರು ಮಾದರಿ ಕ್ರಿಕೆಟ್ (ಟೆಸ್ಟ್, ಟಿ20, ಏಕದಿನ) ನಲ್ಲಿ ಶತಕ ಬಾರಿಸಿ ದಾಖಲೆ ಬರೆದರು. ಈ ಮೂಲಕ ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಎಲ್ಲಾ ಮೂರು ಮಾದರಿ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರನಾಗಿ ದಾಖಲೆ ಬರೆದರು.

ರೋಹಿತ್‍ಗೆ ಉತ್ತಮ ಸಾಥ್ ನೀಡಿದ ಉಪನಾಯಕ ಅಜಿಂಕ್ಯ ರಹಾನೆ 67 ರನ್(149 ಬಾಲ್, 9 ಬೌಂಡರಿ) ಬಾರಿಸಿ ಮಿಂಚಿದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 300 ರನ್‍ಗೆ 6 ವಿಕೆಟ್ ಕಳೆದುಕೊಂಡಿದೆ. ರಿಷಬ್ ಪಂತ್ 33 ರನ್ (56 ಬಾಲ್, 5 ಬೌಂಡರಿ, 1 ಸಿಕ್ಸರ್) ಮತ್ತು ಅಕ್ಷರ್ ಪಟೇಲ್ 13 ರನ್ (19 ಬಾಲ್, 1 ಬೌಂಡರಿ) ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಜೆಕ್ ಲೀಚ್ ಮತ್ತು ಮೊಯಿನ್ ಆಲಿ 2 ವಿಕೆಟ್ ಪಡೆದು ಮಿಂಚಿದರೆ, ಓಲಿ ಸ್ಟೋನ್ ಮತ್ತು ಜೋ ರೂಟ್ ತಲಾ 1 ವಿಕೆಟ್ ಕಬಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *