ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಲು ಹೊತ್ತಿದ್ದ ಹರಕೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೀರಿಸಿದ್ದಾರೆ.
ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ರೋಹಿಣಿ ಸಿಂಧೂರಿ ತಾನು ಹೊತ್ತಿದ್ದ ಹರಕೆಯನ್ನು ಒಪ್ಪಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ದಸರಾ ಹೊತ್ತಿನಲ್ಲೇ ಮೈಸೂರಿಗೆ ಡಿಸಿಯಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ಸುಸೂತ್ರವಾಗಿ ನಡೆಯುವಂತೆ ಹರಕೆ ಹೊತ್ತಿದ್ದರು.
ನವರಾತ್ರಿಯ 9 ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ. ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ರೋಹಿಣಿ ಕುಟುಂಬ ಸಂಜೆ ಬೆಟ್ಟಕ್ಕೆ ತೆರಳಿ ರಥ ಎಳೆದಿದೆ.
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತಿದ್ದ ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದಾಗಿ ಈ ಬಾರಿ ಜಂಬೂ ಸವಾರಿ ಈ ಬಾರಿ ಕೇವಲ 500 ಮೀಟರ್‍ಗೆ ಸೀಮಿತವಾಗಿತ್ತು. ಜಂಬೂಸವಾರಿ ಕಾರ್ಯಕ್ರಮ ಆರಂಭವಾಗೋದೇ ನಾಡದೊರೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ. ಕುಂಭಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ರು. ಸಿಎಂ ಯಡಿಯೂರಪ್ಪ ಜೊತೆ ಎಸ್‍ಟಿ ಸೋಮಶೇಖರ್, ಸಿಟಿ ರವಿ, ಪ್ರತಾಪ್ ಸಿಂಹ ಭಾಗಿಯಾಗಿದ್ರು.
ಕೊರೊನಾದಿಂದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ಕೊರೊನಾ ಇದ್ದಿದ್ದರಿಂದ ಸರ್ಕಾರದ ಆದೇಶದನ್ವಯ ಕೇವಲ 500 ಮೀಟರ್ ಮಾತ್ರ ಜಂಬೂಸವಾರಿ ಸಾಗಿತು. ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಹೊತ್ತ ಅಭಿಮನ್ಯು, ಐದೂವರೆ ಕಿ.ಮೀ. ದೂರದ ಬನ್ನಿಮಟ್ಟಪದ ಬದಲಿಗೆ ಅರಮನೆ ಆವರಣದಲ್ಲಿ 500 ಮೀಟರ್ ಮಾತ್ರ ಹೆಜ್ಜೆ ಹಾಕಿದ್ದಾನೆ.