ಬೆಂಗಳೂರು: ದಲಿತ ಕವಿ, ಗೀತ ರಚನೆಕಾರ, ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯವರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ಪ್ರಾಧ್ಯಾಪಕ, ವಿಧಾನಪರಿಷತ್ ನ ಮಾಜಿ ಸದಸ್ಯ ಹಾಗೂ ನನ್ನ ಬಹುಕಾಲದ ಮಿತ್ರ ಸಿದ್ದಲಿಂಗಯ್ಯನವರ ಸಾವು ನನ್ನ ಪಾಲಿಗೆ ಆಘಾತಕಾರಿಯಾದುದು ಮಾತ್ರವಲ್ಲ ಅನಿರೀಕ್ಷಿತವೂ ಹೌದು. 66 ಸಾಯುವ ವಯಸ್ಸಾಗಿರಲಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಲಿಂಗಯ್ಯನವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಶೀಘ್ರ ಮನೆಗೆ ಹಿಂದಿರುಗುತ್ತಾರೆ ಎಂದು ಅವರು ಗೆಳೆಯರು ಹೇಳುತ್ತಿದ್ದರು. ಆದರೆ ಅವರ ಸಾವಿನ ಮನೆಗೆ ತೆರಳಿದ್ದಾರೆ.
ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸಣ್ಣ ಪ್ರಾಯದ ಕವಿ ಸಿದ್ದಲಿಂಗಯ್ಯನವರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಿದ್ದರು. ಆ ಕಾಲದಿಂದ ಸಿದ್ದಲಿಂಗಯ್ಯನವರು ನನಗೆ ಪರಿಚಿತರು. ಹೊಲೆ ಮಾದಿಗರ ಹಾಡು ಕವನ ಸಂಕಲನದ ಮೂಲಕ ಆ ಕಾಲದಲ್ಲಿಯೇ ಮನೆಮಾತಾಗಿದ್ದ ಸಿದ್ದಲಿಂಗಯ್ಯನವರು ಸಾಹಿತ್ಯವನ್ನು ಸಾಮಾಜಿಕ ಬದಲಾವಣೆಯ ಅಸ್ತ್ರವನ್ನಾಗಿ ಮಾಡಿ ಸಮಾನತೆಯ ಹೋರಾಟವನ್ನು ಮುನ್ನಡೆಸಿದವರು. ಕನ್ನಡ ಸಾಹಿತ್ಯದಲ್ಲಿ ದಲಿತ ಲೋಕವೊಂದನ್ನು ಅನಾವರಣಗೊಳಿಸಿದ ಬಂಡಾಯ ಸಾಹಿತ್ಯ ಚಳುವಳಿಯ ಸಾಹಿತಿಗಳಲ್ಲಿ ಸಿದ್ದಲಿಂಗಯ್ಯ ಪ್ರಮುಖರು. ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲೊಬ್ಬರಾಗಿದ್ದರು.
ಕೆಂಡದಂತಹ ಕವನಗಳನ್ನು ಬರೆಯುತ್ತಿದ್ದ ಸಿದ್ದಲಿಂಗಯ್ಯನವರು ವೈಯಕ್ತಿಕವಾಗಿ ಬಹಳ ಮೃದು ಸ್ವಭಾವದ ಮುಜುಗರದ ವ್ಯಕ್ತಿ. ತಾವಿದ್ದಲ್ಲಿ ತನ್ನ ಮಾತುಗಳ ಮೂಲಕವೇ ನಗು,ಸಂತೋಷ, ವಿನೋದದ ಲವಲವಿಕೆಯ ಲೋಕವನ್ನೇ ಅವರು ಸೃಷ್ಟಿಸುತ್ತಿದ್ದರು. ಸಿದ್ದಲಿಂಗಯ್ಯನವರು ಇನ್ನಿಲ್ಲವಾದರೂ ಅವರು ಬರೆದಿರುವ ಸಾಹಿತ್ಯದ ಮೂಲಕ ಸದಾ ನಮ್ಮ ನೆನಪಲ್ಲಿರುತ್ತಾರೆ. ಅವರ ಅಗಲಿಕೆಯ ದು:ಖದಲ್ಲಿರುವ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು, ಅವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.