– ಎರಡು ಕಾರುಗಳಲ್ಲಿ ದರೋಡೆಗೆ ಪ್ಲಾನ್
– ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದ ಪೊಲೀಸರು
ಮಡಿಕೇರಿ: ದರೋಡೆಗೆ ಸಂಚು ರೂಪಿಸಿ ಹೊಂಚುಹಾಕಿದ್ದ ರಾಜ್ಯ ಮತ್ತು ಅಂತರ್ ರಾಜ್ಯದ 9 ಖದೀಮರನ್ನು ಕೊಡಗಿನ ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಎರಡು ಕಾರುಗಳಲ್ಲಿ ದರೋಡೆಗೆ ಪ್ರೀ ಪ್ಲಾನ್ ರೂಪಿಸಿ ಕೊಡಗಿನ ವಿರಾಜಪೇಟೆಯ ಕೇರಳ ರಸ್ತೆಯಲ್ಲಿ ಸಜ್ಜಾಗಿದ್ದರು. ಪೊಲೀಸರು ಬಾರದಿದ್ದಲ್ಲಿ ಎಲ್ಲಿ ದರೋಡೆ ನಡೆಯುವುದು ಪಕ್ಕಾ ಆಗಿತ್ತು.
Advertisement
Advertisement
ವಿರಾಜಪೇಟೆ ಪೊಲೀಸ್ ಠಾಣೆಯ ಎಸ್‍ಐ ಬೋಜಪ್ಪ ಮತ್ತು ತಂಡ ಎಂದಿನಂತೆ ರಾತ್ರಿ ಬೀಟ್ ಗೆ ಹೋಗಿದೆ. ಈ ವೇಳೆ ವಿರಾಜಪೇಟೆಯಿಂದ ಕೇರಳಕ್ಕೆ ಹೋಗುವ ರಸ್ತೆಯಲ್ಲಿ ಲಕ್ಷ್ಮಿ ಹೊಟೇಲ್ ಬಳಿ ಎರಡು ಕಾರುಗಳಲ್ಲಿದ್ದ 9 ಜನರು ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಎರಡು ಕಾರುಗಳನ್ನು ಚೇಸ್ ಮಾಡಿದ್ದಾರೆ. ಕೊನೆಗೂ ಎರಡು ಕಾರುಗಳನ್ನು ಅಡ್ಡಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳಿಕ ಕಾರುಗಳನ್ನು ತಪಾಸಣೆ ಮಾಡಿದ ಪೊಲೀಸರಿಗೆ ಅಚ್ಚರಿಯಾಗಿದೆ. ಎರಡು ಕಾರುಗಳಲ್ಲಿ ಕತ್ತಿ, ಚಾಕು, ತಲವಾರ್ ಮತ್ತು ಕಾರದ ಪುಡಿ ಸೇರಿದಂತೆ ದರೋಡೆಗೆ ಬಳಸಲು ತಂದಿದ್ದ ವಿವಿಧ ವಸ್ತುಗಳು ಸಿಕ್ಕಿವೆ.
Advertisement
Advertisement
ತಕ್ಷಣವೇ 9 ಜನರನ್ನು ಬಂಧಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಬಂಧಿತರು ದರೋಡೆಗೆ ಸಂಚು ರೂಪಿಸಿ ಬಂದಿದ್ದರು ಎಂಬ ಸತ್ಯ ಬಯಲಾಗಿದೆ. ದರೋಡೆಗೆ ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಕೇರಳದ ಇಬ್ಬರು, ತಮಿಳುನಾಡಿನ ಒಬ್ಬ ಮತ್ತು ಬೆಂಗಳೂರಿನ ಆರು ಖದೀಮರು ಸೇರಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 399 ಮತ್ತು 402 ಅಡಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ತಳ್ಳಿದ್ದಾರೆ.