– ನಮ್ಮ ದೇಶದ ಸೈನಿಕರು ಸಮರ್ಥರು
– ಎರಡು ದೇಶಗಳ ಪ್ರಧಾನಿಗಳಲ್ಲಿ ಮನವಿ
ಬೆಂಗಳೂರು: ಭಾರತ ಹಾಗೂ ಚೀನಾ ನಡುವೆ ಯುದ್ಧ ಸಂಘರ್ಷವಾಗಿದ್ದು, ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ದುರದೃಷ್ಟಕರ ವಿಚಾರವಾಗಿದೆ. ಈಗಾಗಲೇ ದೇಶದಲ್ಲಿ ಕೋವಿಡ್ 19 ಸಮಸ್ಯೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಈ ವೇಳೆ ನಮ್ಮ ದೇಶ ಮತ್ತು ಚೀನಾ ದೇಶದ ನಡುವೆ ಸಂಘರ್ಷ ನಡೆಯುವಂತ ವಾತಾವರಣ ನಿರ್ಮಾಣವಾಗಿದೆ. ಇದು ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದರು.
Advertisement
Advertisement
ಭಾರತ ಹಾಗೂ ಚೀನಾ ಎರಡು ದೇಶದ ಪ್ರಧಾನಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಅದೇನೆಂದರೆ ಇಂತಹ ಸನ್ನಿವೇಶದಲ್ಲಿ ಪರಸ್ಪರ ಅವಿಶ್ವಾಸದ ಹಿನ್ನೆಲೆಯಲ್ಲಿ ಅಥವಾ ಬೇರೆ ಬೇರೆ ಕಾರಣದಿಂದ ಯುದ್ಧದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಇದರಿಂದ ಒಂದು ಕಡೆ ಅಮಾಯಕ ಯೋಧರ ಬಲಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಎರಡು ದೇಶಗಳ ನಡುವಿನ ಸಾಮರಸ್ಯ ಹಾಳುಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.
Advertisement
Advertisement
45 ವರ್ಷಗಳ ನಂತರ ಯುದ್ಧದ ವಾತಾವರಣ ಮೊದಲ ಬಾರಿಗೆ ಆಗಿದೆ. 1967ರ ಯುದ್ಧದ ನಂತರ ಎರಡು ದೇಶಗಳ ನಡುವೆ ಸಾಮರಸ್ಯ ಇರಲಿಲ್ಲ. 35 ವರ್ಷಗಳ ನಂತರ ಚೀನಾದ ಪ್ರಧಾನಿ ದೆಹಲಿಗೆ ಬಂದಿದ್ದು ದೇವೇಗೌಡರು ಪ್ರಧಾನಿ ಆದಾಗ. ಮೊದಲನೇ ಬಾರಿಗೆ ಎಚ್.ಡಿ. ದೇವೇಗೌಡರು ಪ್ರಧಾನಿ ಆದಾಗ ಒಪ್ಪಂದ ಆಗಿದೆ. ಆದರೆ ಅಂದು ದೊಡ್ಡ ಮಟ್ಟದ ಪ್ರಚಾರ ಸಿಗಲಿಲ್ಲ. ಕನ್ನಡಿಗ ಪ್ರಧಾನಿ ಪ್ರಚಾರ ಪಡೆಯದೆ, ದೇಶವನ್ನು ರಕ್ಷಣೆ ಮಾಡುವಲ್ಲಿ ಮಾಡಿದ ಕೆಲಸ ನೆನೆಪಿಸಿಕೊಳ್ಳುವ ಕೆಲಸ ಯಾರೂ ಮಾಡಿಲ್ಲ. ಆದರೆ ಅದು ಇತಿಹಾಸ, ಆಗ ನಾನು ಎಂಪಿ ಆಗಿದ್ದೆ ಎಂದು ಹೇಳಿದರು.
ಈಗ ನಮ್ಮ ದೇಶದ ಪ್ರಧಾನಿ ಇಡೀ ವಿಶ್ವದಲ್ಲೇ ಬಲಾಢ್ಯ ಪ್ರಧಾನಿ ಅಂತ ಚರ್ಚೆಯಾಗುತ್ತಿದೆ. ಇವತ್ತು ಬಲಾಢ್ಯತೆ ಹೊಂದುವುದು ಬೇರೆ. ಶಾಂತಿಯುತವಾಗಿ ಅಕ್ಕಪಕ್ಕದ ದೇಶಗಳ ಜೊತೆ ವಿಶ್ವಾಸ ಮೂಡಿಸಿಕೊಂಡು ಕೆಲಸ ಮಾಡಬೇಕು. ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ನಮ್ಮ ದೇಶದ ಸೈನಿಕರು ಎಲ್ಲ ರೀತಿಯಲ್ಲಿ ಸಮರ್ಥರಿದ್ದಾರೆ. ನಮ್ಮ ದೇಶದ ಸೈನಿಕರ ಸಾಹಸ ಬೇರೆ ದೇಶಗಳ ಸೈನಿಕರಿಗೆ ಏನು ಕಡಿಮೆಯಿಲ್ಲ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಯನ್ನ ಚೀನಾ ಹುಡುಗಾಟಿಕೆ ಅಂತ ಪರಿಗಣಿಸೋದು ಬೇಡ ಎಂದರು.
ಈಗಾಗಲೇ ಕೊರೊನಾದಿಂದ ಜಗತ್ತಲ್ಲಿ ಸಾವು ಸಂಭವಿಸುತ್ತಿವೆ. ಹೀಗಾಗಿ ಪರಸ್ಪರ ಶಾಂತಿಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಚರ್ಚೆಯ ಹಂತದಲ್ಲೇ ಈ ರೀತಿಯ ಯೋಧರ ಹತ್ಯೆಯಾಗಿರೋದು ಖಂಡನೀಯ. ಚೀನಾ ದೇಶದ ನಡುವಳಿಕೆ ಸಹ ಸರಿಯಲ್ಲ. ಇದನ್ನು ಇಲ್ಲಿಗೆ ಸ್ಥಗಿತಗೊಳಿಸಿ ಹೊಂದಾಣಿಕೆ ಮೂಲಕ ಪರಿಹರಿಸಿಕೊಳ್ಳಬೇಕು. ಸಾವು-ನೋವುಗಳು ಆಗದಂತೆ ತಡೆಯಬೇಕು. ಜವಾಬ್ದಾರಿಯುತ ಸ್ಥಾನಮಾನದಲ್ಲಿರುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.