ದನದ ಬಾಲ ಸೆಳೆದು ಗಟ್ಟಿ ಹಿಡಿದ ಮರ – ಜೋಯಿಡಾದಲ್ಲೊಂದು ಅಚ್ಚರಿಯ ಘಟನೆ

Public TV
2 Min Read
Joida tree

ಕಾರವಾರ: ಕೆಲವು ಗಿಡ, ಮರಗಳು ಪ್ರಾಣಿಯ ರಕ್ತ ಹೀರುತ್ತವೆ, ಕೀಟಗಳನ್ನು ತಿನ್ನುತ್ತವೆ ಎನ್ನುವ ಅಂತೆ ಕಂತೆಗಳು ನೀವು ಕೇಳಿರಬಹುದು. ಈ ಅಂತೆ ಕಂತೆಗಳು ನಿಜ ಎನ್ನುವಂತೆ ಸಾವಿರಾರು ವರ್ಷಗಳಿಂದ ತನ್ನ ಮಡಿಲಿನಲ್ಲಿ ಅಪರೂಪದ ವನಸಿರಿಯನ್ನು ಹೊತ್ತು ನಿಂತಿರುವ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಸಮೀಪದ ಹನ್ನೊಲ್ಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ.

ಕಾಡಿನಲ್ಲಿ ಹಸಿರು ಹುಲ್ಲು ಮೇಯಲು ಹೋಗಿದ್ದ ಹಸುವಿನ ಬಾಲವನ್ನು ಜಂಬೆ ಮರ ಸೆಳೆದುಕೊಂಡಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ದನದ ಸೆಳೆದುಕೊಂಡ ಬಾಲವನ್ನು ಬಿಡಿಸಿಕೊಳ್ಳದಷ್ಟರ ಮಟ್ಟಿಗೆ ಹಿಡಿದು ರಕ್ತವನ್ನು ಹೀರಿದೆ. ಪರಿಣಾಮ ಇದರೊಂದಿಗೆ ತೆರಳಿದ್ದ ಎಲ್ಲಾ ಹಸುಗಳು ಕಾಡಿನಿಂದ ಮರಳಿ ಮನೆಗೆ ಬಂದರೂ ಈ ದನ ಮಾತ್ರ ಮನೆಗೆ ಮರಳಿರಲಿಲ್ಲ.

Joida tree 2

ಪಕ್ಕದ ಊರಿನ ಸದಾಶಿವ ಪಟಗಾರ್, ಸುಬ್ರಾಯ ಕುಣಬಿ, ಪರಶುರಾಮ ದೇಸಾಯಿ ಅವರು ಇದೇ ಕಾಡು ಮಾರ್ಗವಾಗಿ ಸಂಚರಿಸುತ್ತಿದ್ದಾಗ ಈ ದನ ನಿಂತಲ್ಲೇ ಒದ್ದಾಡುವುದನ್ನು ನೋಡಿದ್ದಾರೆ. ಕಾಡಿನಲ್ಲಿ ದನವನ್ನು ಯಾರೂ ಕಟ್ಟಿ ಹಾಕುವುದಿಲ್ಲ. ಆದರೂ ದನ ಕಟ್ಟಿ ಹಾಕಿದಂತೆ ವರ್ತನೆ ಮಾಡುತ್ತಿದೆಯಲ್ಲ ಎಂದು ತಿಳಿದು ಹತ್ತಿರ ಹೋದಾಗ ದನದ ಬಾಲ ಮರಕ್ಕೆ ಸುತ್ತಿಕೊಂಡು ಒದ್ದಾಡುತ್ತಿರುವುದನ್ನು ನೋಡಿದ್ದಾರೆ.

ಈ ವೇಳೆ ಮರಕ್ಕೆ ಸುತ್ತಿಕೊಂಡಿದ್ದ ಬಾಲವನ್ನು ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಿಡಿದುಕೊಂಡ ಮರ ಮಾತ್ರ ದನದ ಬಾಲದ ಹಿಡಿತ ಸಡಿಲಿಸಲಿಲ್ಲ. ಕೊನೆಗೆ ಬೈಕಿನ ಕೀಯಿಂದ ಮರಕ್ಕೆ ಚುಚ್ಚಿದ್ದು ನಂತರ ನಿಧಾನವಾಗಿ ಬಾಲ ಮರದ ಸಡಿಲಿಕೆಯಿಂದ ಬಿಟ್ಟಿದ್ದು ಇದನ್ನು ಅವರು ವಿಡಿಯೋ ಸಹ ಮಾಡಿ ದಾಖಲಿಸಿದ್ದಾರೆ.

Joida tree 3

ವಿಚಾರ ಹೇಳಲು ಆಶ್ಚರ್ಯ ಆದರೂ ಮಲೆನಾಡು ಭಾಗದಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಆದರೆ ಇಲ್ಲಿಯವರೆಗೆ ಇದು ದಾಖಲಾಗಿರಲಿಲ್ಲ. ಮಲೆನಾಡಿನ ಭಾಗದಲ್ಲಿ ಕಾಡಿಗೆ ಹೋದ ಹಲವು ಹಸುಗಳು ಮರಳಿ ಬರುವಾಗ ತಮ್ಮ ಬಾಲವನ್ನ ತುಂಡರಿಸಿಕೊಂಡು ಬಂದ ಘಟನೆಗಳು ಹಲವು ಇದೆ. ಹಿಂದೆ ಇವುಗಳನ್ನು ಹಲವರು ಕಣ್ಣಾರೆ ಕಂಡರೂ ದಾಖಲಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಇದು ದಾಖಲಾಗಿದ್ದು ಸಹ್ಯಾದ್ರಿ ಶ್ರೇಣಿಯ ಕಾಡಿನಲ್ಲಿ ಈ ರೀತಿಯ ಮರವೂ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜನ ಈಗ ವಿಡಿಯೋ ನೋಡಿ “ದನದ ರಕ್ತ ಹೀರುವ ಮರ”ಎಂದು ಕರೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *