ಚಿತ್ರದುರ್ಗ: ಗ್ರಾಮವೊಂದಕ್ಕೆ ನುಗ್ಗಿ ಜಾನುವಾರು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಬೆತ್ತಲೆಗೊಳಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸರಸ್ವತಿಹಟ್ಪಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಹಿರಿಯೂರು ತಾಲೂಕಿನ ಬಡಗೊಲ್ಲರಹಟ್ಟಿ ಗ್ರಾಮದ ಈಶ್ವರ, ಸರಸ್ವತಿಹಟ್ಟಿಯ ಗ್ರಾಮಸ್ಥರು ಹೊಲಗಳಿಗೆ ತೆರಳುವುದನ್ನೇ ಕಾಯ್ದಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಖಚಿತಪಡಿಸಿಕೊಂಡು ಕೊಟ್ಟಿಗೆಯಲ್ಲಿದ್ದ ಕರುಗಳನ್ನು ಎಳೆದೊಯ್ಯುತ್ತಿದ್ದನು. ಈ ವೇಳೆ ಗ್ರಾಮದ ಯುವಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆತ ಸಿಕ್ಕಿದ್ದೆ ತಡ ರೊಚ್ಚಿಗೆದ್ದ ಯುವಕರು ಆತನ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಗೊಳಿಸಿ, ಮುಖದ ಮೇಲೆ ಕೆಂಪು ಬಣ್ಣದಿಂದ ಮೀಸೆ ಬಳಿದು ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ಕೆರೆಮುಂದಲಹಟ್ಟಿಯಿಂದ ಸೂರಪ್ಪನಹಟ್ಟಿವರೆಗೆ ಕತ್ತೆ ಮೇಲೆ ಮೆರವಣಿಗೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರಿಯೂರು ಗ್ರಾಮಾಂತರ ಪೊಲೀಸರು ಜಾನುವಾರು ಕಳ್ಳನನ್ನು ಬಂಧಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳ್ಳ ಏನೇ ತಪ್ಪು ಮಾಡಿದ್ದರೂ ಸಹ ಅಲ್ಲಿನ ಗ್ರಾಮಸ್ಥರು ಆತನನ್ನು ಹಿಡಿದ ಬಳಿಕ ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ವ್ಯಕ್ತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡಿರೋದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಹಿರಿಯೂರು ಗ್ರಾಮಾಂತರ ಪೊಲೀಸರು ಹಾಗೂ ತಹಶೀಲ್ದಾರ್ ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.