ಚಾಮರಾಜನಗರ: ವರ್ಷದ 365 ದಿನಗಳಲ್ಲೂ ದಟ್ಟ ಮಂಜಿನಿಂದ ಕೂಡಿದ ರಾಜ್ಯದ ಏಕೈಕ ಪ್ರವಾಸಿ ತಾಣ ಅಂದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಸದ್ಯ ಗೋಪಾಲಸ್ವಾಮಿ ಬೆಟ್ಟ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವರಿಸಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 4,769 ಅಡಿ ಎತ್ತರದಲ್ಲಿದೆ. ಜೋಳರ ಕಾಲದ ಇತಿಹಾಸವಿರುವ ಗೋಪಾಲ ಸ್ವಾಮಿ ದೇವಾಲಯವನ್ನು 1315ರಲ್ಲಿ ನಿರ್ಮಿಸಲಾಗಿದೆ. ಋತುಮಾನಗಳ ಬೆರಗಿಗೆ ಬೆರಗಾಗುವ ಈ ಪ್ರಕೃತಿ ಸೊಬಗಿನ ಈ ಪುಣ್ಯ ಕ್ಷೇತ್ರದ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತದೆ.
ವಿಶಾಲ ಹುಲ್ಲುಗಾವಲು, ಸುಂದರ ಶೋಲಾ ಅರಣ್ಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಆಕಾಶವನ್ನೇ ಹೊದ್ದು ನಿಂತಿರುವ ಹಾಗೆ ಕಾಣುತ್ತದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಜಿಎಸ್ ಬೆಟ್ಟದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ಪ್ರೇಮಿಗಳ ಅಚ್ಚು ಮೆಚ್ಚಿನ ತಾಣ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ.
ವೀಕೆಂಡ್‍ನಲ್ಲಂತೂ ಪ್ರವಾಸಿಗರಿಂದ ಗೋಪಾಲಸ್ವಾಮಿ ಬೆಟ್ಟ ಫುಲ್ ರಶ್ ಆಗಿರುತ್ತದೆ. ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೊಬಗನ್ನ ವರ್ಣಿಸುತ್ತಾರೆ. ತಂಪಾದ ವಾತಾವರಣದಿಂದ ಕೂಡಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಬೆಟ್ಟದ ಮೇಲೆ ಪ್ರವಾಸಿಗರಿಗೆ ಮೂಲಭೂತ ಇನ್ನಷ್ಟು ಮೂಲಸೌಕರ್ಯ ಒದಗಿಸಬೇಕು ಎಂದು ಪ್ರವಾಸಿಗರು ಕೇಳಿಕೊಂಡಿದ್ದಾರೆ.