– ಶೂ ಧರಿಸಿ ನಿಂತ ಫೋಟೋಗೆ ಭಾರೀ ವಿರೋಧ
– ಸೂಕ್ತ ಕ್ರಮಕ್ಕೆ ನೆಟ್ಟಿಗರು ಒತ್ತಾಯ
ನೆಲಮಂಗಲ: ಪ್ರವಾಸಿ ಸ್ಥಳಗಳನ್ನು ಉಳಿಸುವುದು ಹಾಗೂ ಆ ಕ್ಷೇತ್ರದ ಪಾವಿತ್ರತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದರೆ ಇಂಥವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾದವರೇ ಇಲ್ಲಿ ಸ್ವಲ್ಪ ಸಮಯದ ಮೋಜು ಮಸ್ತಿ ಮಾಡಿ ಎಲ್ಲವನ್ನೂ ಮಣ್ಣು ಪಾಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆಯ ಪವಿತ್ರ ಬೆಟ್ಟದ ತುತ್ತತುದಿಯ ತೀರ್ಥ ಕಂಬದ ಪ್ರಾಂಗಣವನ್ನು ಅಪವಿತ್ರ ಮಾಡಿದ ಆರೋಪ ಕಿರುತೆರೆ ನಟ ಹಾಗೂ ನಟಿ ಮೇಲೆ ಬಂದಿದೆ.
ಕಿರುತೆರೆ ನಟಿ ಕವಿತಾ ಹಾಗೂ ನಟ ಚಂದನ್, ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆ ಬೆಟ್ಟದಲ್ಲಿ ತೀರ್ಥ ಕಂಬದ ಬಳಿ ಶೂ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಚಂದನ್ ತಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ಈ ಫೋಟೋ ಭಾರೀ ವಿವಾದಕ್ಕೆ ಕಾರಣವಾಗಿದೆ. ನೆಲಮಂಗಲ ತಾಲೂಕಿನ ಶಿವಗಂಗೆಯ ಬೆಟ್ಟದ ತುತ್ತ ತುದಿಯಲ್ಲಿ ಧಾರಾವಾಹಿ ನಟರ ಮೋಜುಮಸ್ತಿ ಭಕ್ತರಿಗೆ ಬೇಸರ ಮೂಡಿಸಿದೆ.
ದಕ್ಷಿಣಕಾಶಿ ಪುರಾಣ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ. ಜನವರಿ 15ರ ಮಕರ ಸಂಕ್ರಾಂತಿಯ ದಿನ ಈ ತೀರ್ಥ ಕಂಬದಲ್ಲಿ ಉದ್ಭವಾದ ಜಲದಿಂದ, ಪ್ರಸಿದ್ಧ ಗಿರಿಜಾ ಕಲ್ಯಾಣವಾಗುತ್ತದೆ. ತೀರ್ಥೋದ್ಭವವಾಗುವ ಸ್ಥಳದಲ್ಲಿ ಇದೀಗ ಅಪವಿತ್ರವಾಗಿದೆ. ಪವಾಡ ರೀತಿಯಲ್ಲಿ ಗಂಗೆ ಉತ್ಪತ್ತಿಯಾಗುವ ಪವಿತ್ರ ಕ್ಷೇತ್ರದಲ್ಲಿ ಇದೀಗ ಅಪಚಾರದ ಮಾತು ಕೇಳಿಬರುತ್ತಿದೆ.
ಕೊರೊನಾ ಸಮಯದಲ್ಲೂ ಬೆಟ್ಟದ ಮೇಲೆ ತಾರಾ ಜೋಡಿ ಮಸ್ತ್ ಎಂಜಾಯ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಟ ನಟಿಯ ವಿರುದ್ಧ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ. ದೇವರ ಮಹಿಮೆ ತಿಳಿಯದೆ ಶೂ ಧರಿಸಿ ಫೋಟೋ ತೆಗೆದುಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ನಟ ನಟಿಯ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.