ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮತ್ತಷ್ಟು ಅನ್‍ಲಾಕ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿದ್ದು, ಬಸ್ ಸಂಚಾರ ಸೇರಿ ಎಲ್ಲ ಚಟುವಟಿಕೆಗಳಿಗೆ ಸಂಜೆ 5ರವರೆಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.
ಅನ್‍ಲಾಕ್ ಇದ್ದರೂ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಈ ಬಾರಿಯ ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿದೆ ಅವಕಾಶ ಇದ್ದು, ಹಾಲು, ತರಕಾರಿ, ಮೀನು, ಮಾಂಸ ಮತ್ತು ದಿನಸಿ ಖರೀದಿಗಷ್ಟೇ ವಾರಾಂತ್ಯ ಅವಕಾಶವಿದೆ.
ವೀಕೆಂಡ್ ವೇಳೆ ಅಗತ್ಯ ವಸ್ತು ಹೊರತುಪಡಿಸಿ ಯಾವುದೇ ಅಂಗಡಿ ತೆರೆಯಲು ಹಾಗೂ ಬಸ್ ಸಂಚಾರಕ್ಕೂ ಅವಕಾಶ ಇಲ್ಲ. ಈ ಹೊಸ ಆದೇಶ ಜುಲೈ 5ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.