ಮಡಿಕೇರಿ: ದಂಡ ವಸೂಲಿ ಮಾಡಿ ಸರ್ಕಾರ ನಡೆಸುವ ಸ್ಥಿತಿ ನಮಗಿಲ್ಲ. ಕಾಂಗ್ರೆಸ್ ನಾಯಕರಿಗೆ ಹಣದ ಅಗತ್ಯತೆ ಇರುವುದು. ಗತಿ ಇಲ್ಲದ ಸ್ಥಿತಿ ಸರ್ಕಾರಕ್ಕಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಬಿಜೆಪಿಯಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ದಂಡ ವಸೂಲಿ ಮಾಡುತ್ತಿದ್ದೆವು. ಈಗ ಅದನ್ನು ಕಡಿಮೆ ಮಾಡಿದ್ದೇವೆ ಎಂದರು.
ಶಾಲೆ ಆರಂಭವಾದರೆ ಕೊರೊನಾ ಮತ್ತಷ್ಟು ಜಾಸ್ತಿ ಆಗುತ್ತೆ. ಆದ್ದರಿಂದ ಸದ್ಯಕ್ಕೆ ಶಾಲೆ ಆರಂಭಿಸುವುದು ಬೇಡ. ಮಕ್ಕಳಿಂದಲೇ ಕೊರೊನಾ ಹೆಚ್ಚಾಗಿ ಹರಡಬಹುದು. ಕೊರೊನಾ ಕಡಿಮೆ ಆಗುವವರೆಗೆ ಶಾಲೆ ಆರಂಭಿಸುವುದು ಬೇಡ ಎಂದು ತಿಳಿಸಿದರು.
ಆರಂಭದಲ್ಲಿ ಕೊಡಗಿನಲ್ಲಿ ಒಂದೋ ಎರಡೋ ಕೊರೊನಾ ಕೇಸ್ ಬರುತ್ತಿದ್ದವು. ಈಗ ಜಿಲ್ಲೆಯಲ್ಲಿ 100 ಹತ್ತಿರ ಪ್ರತೀದಿನ ಕೇಸ್ ಬರುತ್ತಿವೆ. ಹೀಗಾಗಿ ಸದ್ಯಕ್ಕೆ ಶಾಲೆ ಆರಂಭಿಸದಂತೆ ಸಚಿವರಿಗೂ ಒತ್ತಾಯಿಸುತ್ತೇನೆ. ಇದು ಪೋಷಕರ ಅಭಿಪ್ರಾಯ ಕೂಡ ಇದೇ ಆಗಿದೆ ಎಂದರು.