ವಿಜಯಪುರ: ಮಹಾಮಾರಿ ಕೊರೊನಾ ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿ ಆದೇಶಿಸಿದೆ. ವಾಹನ ಸವಾರರು ಮಾಸ್ಕ್ ಹಾಕಿಲ್ಲ ಅಂದ್ರೆ 250 ರಿಂದ 500 ದಂಡ ಕಟ್ಟಬೇಕಾಗತ್ತೆ. ಇದರ ಹಿನ್ನೆಲೆಯಲ್ಲಿ ದಂಡ ವಸೂಲಾತಿ ಕೂಡ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಆದರೆ ಪೊಲೀಸಪ್ಪನೊಬ್ಬ ಇದನ್ನೇ ಬಂಡವಾಳ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೌದು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಎಚ್.ಎಸ್ ಹೊಸ್ಮನಿ, ಮಣ್ಣೂರು ಗ್ರಾಮದಲ್ಲಿ ದ್ವಿಚಕ್ರವಾಹನಗಳಿಗೆ ದಂಡ ಹಾಕುವ ನೆಪದಲ್ಲಿ ಪ್ರತಿಯೊಬ್ಬ ವಾಹನ ಸವಾರರಿಂದ 500 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇಷ್ಟು ಸಾಲದೇ ಠಾಣೆಯ ಪಿಎಸ್‍ಐ ಅವರೇ ವಸೂಲಿ ಮಾಡಲು ಹೇಳಿದ್ದಾರೆ ಅಂತ ಸಬೂಬು ಹೇಳುತ್ತಾರೆ.
ಹೆಡ್ ಕಾನ್ಸ್ ಸ್ಟೇಬಲ್ ಹೊಸ್ಮನಿಯ ಈ ಹಗಲು ದರೋಡೆಯನ್ನು ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೊಲೀಸಪ್ಪನ ಕಾಟಕ್ಕೆ ಬೇಸತ್ತಿರುವ ಜನರು ನಮಗೆ ತಿನ್ನಲು ಅನ್ನವಿಲ್ಲ. ಇಂತಹದರಲ್ಲಿ ಇವರು ಸುಖಾಸುಮ್ಮನೆ 500 ಸಾವಿರ ಎಂದು ವಸೂಲಿ ಮಾಡ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದ ಆರ್ಥಿಕ ಸಂಕಷ್ಟ ಒಂದು ಕಡೆ ಬಡ ಜನರನ್ನ ಕಾಡುತ್ತಿದ್ದರೆ, ಇನ್ನೊಂದೆಡೆ ಪೊಲೀಸರ ದೌರ್ಜನ್ಯದಿಂದ ಬಡ ಜನರು ಬೆಂದು ಹೋಗಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ.