– ಚಿತ್ರಮಂದಿರ, ರೆಸ್ಟೋರೆಂಟ್‍ಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ
– ಸೋಂಕು ಪತ್ತೆಯಾದ ಎರಡು ಕಾಲೇಜುಗಳು ಬಂದ್
– ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ
ಧಾರವಾಡ: ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಚಿತ್ರ ಮಂದಿರಗಳಲ್ಲಿ ಶೇ.50ಕ್ಕೂ ಹೆಚ್ಚು ಜನರಿಗೆ ಅವಕಾಶವಿಲ್ಲ. ನಿಯಮ ಮೀರಿ ಹೆಚ್ಚು ಜನ ಹತ್ತುವ ಬಸ್ ಸೇರಿದಂತೆ ಇತರೆ ವಾಹನಗಳನ್ನು ಸೀಸ್ ಮಾಡುತ್ತೇವೆ ಎಂದು ಜಿಲ್ಲಾಧಿಖಾರಿ ನಿತೇಶ್ ಪಾಟೀಲ್ ಎಚ್ಚರಿಸಿದರು.
ಕೊರೊನಾ ನಿಯಮ ಜಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಚಿತ್ರ ಮಂದಿರಗಳಲ್ಲಿ ಸಹ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಬಸ್‍ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸಿದರೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೆಚ್ಚಿನ ಜನ ಹತ್ತಿಸಿಕೊಂಡ ವಾಹನವನ್ನು ಸೀಸ್ ಮಾಡುತ್ತೇವೆ. ಅಂಗಡಿಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಸೂಚನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಜಾತ್ರೆ ಹಾಗೂ ಮೆರವಣಿಗೆ ಮಾಡುವಂತಿಲ್ಲ. ವಸತಿ ನಿಲಯ, ಶಾಲೆ, ಬೋರ್ಡಿಂಗ್ ಶಾಲೆಗಳಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಜಿಲ್ಲೆಯ ಪಬ್ ಹಾಗೂ ರೆಸ್ಟೋರೆಂಟ್‍ಗಳು ನಿಯಮ ಪಾಲಿಸದಿದ್ದಲ್ಲಿ ಅಂತಹವುಗಳನ್ನು ಬಂದ್ ಮಾಡಲಾಗುವುದು. ರೆಸ್ಟೋರೆಂಟ್‍ಗಳಲ್ಲಿ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಗೊತ್ತಾಗದೆ ಜಿಲ್ಲೆಯ ಕೆಲ ಶಾಲೆಗಳಿಗೆ ಬಂದಿದ್ದರು. ವಾಪಸ್ ಮನೆಗೆ ಕಳುಹಿಸಲಾಗಿದೆ ಎಂದರು.
ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವ್ ಬಂದಿವೆ. ಅವರು ಸ್ವಯಂ ಪ್ರೇರಿತವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 1.21 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಕೋವಿಡ್ ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.