ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಪರಿಣಾಮ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ.
ರಾತ್ರಿಯಿಡೀ ಸುರಿದ ಮಳೆಗೆ ನೀರಿನ ಮಟ್ಟ ಏರಿಕೆಯಾಗಿ ನದಿ ತಟದ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು ಜಲಾವೃತಗೊಂಡಿವೆ. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿ ಹಾಗೂ ಕುವೆಂಪು ಬಡಾವಣೆ ಸೇರಿದಂತೆ 10ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.
ನೆರೆ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ರಕ್ಷ ಣಾ ಮತ್ತು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸ್ಥಳೀಯ ಹಲವು ಸಂಘಟನೆಗಳ ಯುವಕರ ತಂಡ ರಕ್ಷ ಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಜಲಾವೃತಗೊಂಡ ಮನೆಗಳನ್ನು ಖಾಲಿ ಮಾಡಿದ ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈಗಾಗಾಲೇ ದುಬಾರೆ ರಿವರ್ ಬೋಟ್‌ಗಳನ್ನು ಬಳಸಿಕೊಂಡು ಜಲಾವೃತಗೊಂಡ ಮನೆಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಈ ನಡುವೆ ಹಾರಂಗಿ ಜಲಾಶಯದಿಂದ ನದಿ ನೀರು ಹರಿಸಿದ ಪರಿಣಾಮ ಜಲಾವೃತಗೊಂಡ ಬಡಾವಣೆಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿರುವ ಕಾರಣ ನಿವಾಸಿಗಳು ಆತಂಕದಲ್ಲಿದ್ದಾರೆ.
24 ಗಂಟೆಯಲ್ಲಿ ಜಿಲ್ಲೆಯಲ್ಲಿ 154 ಮಿಲಿ ಮೀಟರ್ ಗೂ ಹೆಚ್ಚು ಮಳೆ ಸುರಿದಿದೆ. ಭಾಗಮಂಡಲ ಬ್ರಹ್ಮಗಿರಿ ತಪ್ಪಲು ತಲಕಾವೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಪರಿಣಾಮ ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದ್ದು ಕಾವೇರಿ ಉಕ್ಕಿ ಹರಿದಿದೆ. ಮಡಿಕೇರಿ – ಭಾಗಮಂಡಲ, ಮಡಿಕೇರಿ – ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.