– ಮಹಿಳೆ ಜೊತೆ ಅಕ್ರಮ ಸಂಬಂಧಕ್ಕಾಗಿ ಇಬ್ಬರ ನಡುವೆ ಜಗಳ
– ಕೋಲಿನಿಂದ ಹೊಡೆದು ಕೊಲೆ
ಲಕ್ನೋ: ತ್ರಿಕೋನ ಪ್ರೇಮ ಕಥೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಲೀಡರ್ ಪುತ್ರನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಉತ್ತರ ಪ್ರದೇಶದ ಗುಲರಿಹಾ ಕ್ಷೇತ್ರದ ಸೊನಬರಸ ಅರಣ್ಯ ಪ್ರದೇಶದಲ್ಲಿ ಕೊಲೆ ನಡೆದಿದೆ.
ಸೊನಬರಸ್ ಬೂತ್ ನ ಬಿಜೆಪಿ ಅಧ್ಯಕ್ಷ ಹೀರಾಲಾಲ್ ಪುತ್ರ ರಾಣಾ ಪ್ರತಾಪ್ ಶವ ಅಕ್ಟೋಬರ್ 16ರಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಆರೋಪಿಗಳು ಶವದ ಮೇಲೆ ಬೈಕ್ ಬೀಳಿಸಿ ಮೇಲ್ನೋಟಕ್ಕೆ ಅಪಘಾತ ಎಂದು ಬಿಂಬಿಸಿದ್ದರು. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ರಾಕೇಶ್ ಯಾದವ್, ರಾಮಕೇಶ್ ಯಾದವ್ ಮತ್ತು ಪನ್ನೆ ಲಾಲ್ ಬಂಧಿತ ಆರೋಪಿಗಳು. ಬಂಧಿತರು ತಮ್ಮ ತಪ್ಪೊಪ್ಪಿಕೊಂಡಿದ್ದು, ಕೊಲೆ ಮಾಡಿದ್ದೇಕೆ ಎಂಬುದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಐಪಿಸಿ ಸೆಕ್ಷನ್ 302, 3(2)5 ಎಸ್‍ಸಿ/ಎಸ್‍ಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
ಅಕ್ರಮ ಸಂಬಂಧ: ಆರೋಪಿ ರಾಮಕೇಶ್ ಯಾದವ್ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಇದೇ ಮಹಿಳೆಯನ್ನ ಮೃತ ರಾಣಾ ಪ್ರತಾಪ್ ಕದ್ದುಮುಚ್ಚಿ ಭೇಟಿಯಾಗುತ್ತಿದ್ದನು. ವಿಷಯ ತಿಳಿದ ರಾಮಕೇಶ್ ಯಾದವ್ ಮಹಿಳೆಯನ್ನ ಭೇಟಿಯಾಗಬೇಡ ಎಂದು ರಾಣಾಗೆ ಎಚ್ಚರಿಕೆ ನೀಡಿದ್ದನು. ಆದ್ರೂ ರಾಣಾ ಮಹಿಳೆ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನು. ಇದರಿಂದ ಕೋಪಗೊಂಡ ರಾಣಾ ಕೊಲೆಗೆ ರಾಮಕೇಶ್ ಸ್ನೇಹಿತರ ಜೊತೆ ಸೇರಿ ಪ್ಲಾನ್ ಮಾಡಿದ್ದನು.
ರಾಣಾ ಅರಣ್ಯ ಪ್ರದೇಶದಲ್ಲಿ ಹೋಗುತ್ತಿರುವಾಗ ಆತನನ್ನ ರಾಮಕೇಶ್ ತನ್ನಿಬ್ಬರ ಸ್ನೇಹಿತತ ಜೊತೆ ಸೇರಿ ತಡೆದಿದ್ದಾರೆ. ಈ ವೇಳೆ ಕೋಲಿನಿಂದ ರಾಣಾ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಕೊನೆಗೆ ಅನುಮಾನ ಬಾರದಿರಲಿ ಎಂದು ರಾಣಾ ಶವದ ಮೇಲೆ ಆತನ ಬೈಕ್ ಬೀಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು.