– 30 ಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡ ಸಮುದ್ರ
ಉಡುಪಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ಟೆ ಚಂಡಮಾರುತತ ಪರಿಣಾಮ ಮರವಂತೆ ಕಡಲ ತೀರದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರಗಳು ನೀರುಪಾಲಾಗೊವೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೆ ಜಿಲ್ಲೆಯಾದ್ಯಂತ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಸಹ ಜಿಲ್ಲಾಡಳಿತ ಎಚ್ಚರಿಸಿದೆ.
ಜಿಲ್ಲೆ ಬೈಂದೂರು ತಾಲೂಕಿನ ಮರವಂತೆ ಕಡಲ ತೀರದಲ್ಲಿ ಕಡಲ್ಗೊರೆತ ಸಂಭವಿಸಿದೆ. ಮರವಂತೆ ಕಡಲ ತೀರದಲ್ಲಿ ಭಾರಿ ಹಾನಿಯಾಗಿದೆ. ಕಡಲ ತಡಿಯಲ್ಲಿ ಭಾರೀ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಸುಮಾರು 30 ಮೀಟರ್‍ನಷ್ಟು ತೀರವನ್ನು ಸಮುದ್ರ ಆಕ್ರಮಿಸಿಕೊಂಡಿದೆ.
ಕಡಲಿನ ರೌದ್ರಾವತಾರ ಕಂಡು ಸಮುದ್ರ ತೀರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲೆಗಳ ತೀವ್ರತೆ ಮುಂದುವರೆದರೆ ಮೀನುಗಾರಿಕಾ ರಸ್ತೆಗೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರ, ಗುಜರಾತ್ ಕರಾವಳಿಯಲ್ಲಿ ತೌಕ್ಟೆ ಚಂಡಮಾರುತ ಎದ್ದಿದ್ದು, ಇದರ ಎಫೆಕ್ಟ್ ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮೇಲೂ ಬಿದ್ದಿದೆ.