ಉಡುಪಿ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತುಳು ಭಾಷೆಯಲ್ಲಿ ಮಾತನಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಮಿತಾಭ್ ಬಚ್ಚನ್ ಗೆ ತುಳು ಕಲಿಸಿದ್ದು ಮತ್ತ್ಯಾರು ಅಲ್ಲ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ.
ಹೌದು. ಹಿಂದಿಯ ಕೌನ್ ಬನೇಗ ಕರೊಡ್ ಪತಿಯ ಕರ್ಮವೀರ ವಿಭಾಗಕ್ಕೆ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ರವಿ ಕಟಪಾಡಿ ಈ ಬಾರಿ ಆಯ್ಕೆಯಾಗಿದ್ದರು. ಕಲಾವಿದ ಅನುಪಮ್ ಖೇರ್ ಜೊತೆ ರವಿ ಅವರು ಹಾಟ್ ಸೀಟಲ್ಲಿ ಕುಳಿತು ಅಮಿತಾಭ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಪ್ರಶ್ನೋತ್ತರ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್, ರವಿ ಕಟಪಾಡಿ ಅವರ ಜೀವನ, ಕಷ್ಟ, ಸೇವೆ ಬಗ್ಗೆ ಮಾತನಾಡುತ್ತಾ ಭಾಷೆ ಸಂಸ್ಕೃತಿಯನ್ನು ಕೆದಕಿದ್ದಾರೆ. ಈ ಸಂದರ್ಭದಲ್ಲಿ ತುಳು ಭಾಷೆಯ ಬಗ್ಗೆ ರವಿ ಕಟಪಾಡಿ ಹೇಳಿದ್ದಾರೆ. ಕುತೂಹಲಗೊಂಡ ಅಮಿತಾಭ್ ಬಚ್ಚನ್ ಅವರಿಗೆ ರವಿ ಕಟಪಾಡಿ ತುಳುವಿನಲ್ಲಿ ಒಂದು ವಾಕ್ಯವನ್ನು ಹೇಳಿದ್ದಾರೆ. ಅಮಿತಾಭ್ ಅದನ್ನು ರಿಪೀಟ್ ಮಾಡಿದ್ದಾರೆ.
ಉಡುಪಿ ಮತ್ತು ಮಂಗಳೂರಿನ ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಹೇಳಿದ್ದಾರೆ. ತುಳು ಭಾಷೆಯನ್ನು ಮಾತನಾಡುವವರಂತೆ ಯಾವುದೇ ಉಚ್ಛಾರ ತಪ್ಪು ಇಲ್ಲದೆ ಅಮಿತಾ ಬಚ್ಚನ್ ಅನುಕರಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವೀಡಿಯೋ ತುಣುಕು ಕರಾವಳಿಯ 2 ಜಿಲ್ಲೆಗಳಲ್ಲಿ ಜನಜನಿತವಾಗಿದೆ. ವಾಟ್ಸಪ್ ಫೇಸ್ಬುಕ್ ಗಳಲ್ಲಿ ಜನ ಈ ವೀಡಿಯೋ ತುಣುಕನ್ನು ಶೇರ್ ಮಾಡುತ್ತಿದ್ದಾರೆ.
ಅಮಿತಾಭ್ ಅವರನ್ನು ನೋಡಿದ್ದು ಅವರ ಜೊತೆ ಮಾತನಾಡಿದ್ದು ನನ್ನ ಜೀವನದ ಮರೆಯಲಾಗದ ಘಟನೆ. ಅಷ್ಟಮಿಯಂದು ವೇಷಧರಿಸಿ 28 ಮಕ್ಕಳಿಗೆ 54 ಲಕ್ಷ ರೂಪಾಯಿ ದಾನ ಮಾಡಿದಾಗ ಸಿಕ್ಕ ಖುಷಿಯೇ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಲ್ಲೂ ಸಿಕ್ಕಿತು ಎಂದು ರವಿ ಕಟಪಾಡಿ ಸಂತಸ ವ್ಯಕ್ತಪಡಿಸಿದ್ದಾರೆ.