ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತಾಲೂಕಿನ ಕದ್ರಾ ಜಲಾಶಯ ಭರ್ತಿಯಾಗಿದ್ದು, ಶನಿವಾರ ಮಧ್ಯಾಹ್ನ ಮೂರು ಕ್ರಸ್ಟ್ ಗೇಟ್‍ಗಳ ಮೂಲಕ 5,500 ಕ್ಯುಸೆಕ್ಸ್ ನೀರನ್ನು ಸಮುದ್ರಕ್ಕೆ ಹರಿಸಲಾಯಿತು.
ನೀರು ಬಿಟ್ಟ ಹಿನ್ನಲೆಯಲ್ಲಿ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ವಿದ್ಯುತ್ ನಿಗಮವು ಸೂಚನೆ ನೀಡಿದೆ. ಕಾರವಾರದ ಕದ್ರಾ ಜಲಾಶಯವು ಹತ್ತು ಗೇಟ್ ಗಳನ್ನು ಹೊಂದಿದ್ದು, 34.50 ಮೀಟರ್ ಗರಿಷ್ಠ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಇದೀಗ 31.50 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನೀರು ಸಂಗ್ರಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಅನುಮತಿ ನೀಡಿದೆ. 2019ರಲ್ಲಿ ಉಂಟಾದ ಪ್ರವಾಹದ ಬಳಿಕ ಈ ಕ್ರಮ ಅನುಸರಿಸಲಾಗುತ್ತಿದೆ.
ಇದು ಕಾಳಿ ನದಿಯ ಕೊನೆಯ ಜಲಾಶಯವಾಗಿದ್ದು, ನದಿಯ ಆರಂಭದಲ್ಲೇ ಇರುವ `ಸೂಪಾ’ ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾಗಿದೆ. ಜಲಾಶಯದ ಸುತ್ತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೂಪಾಕ್ಕೂ ಒಳಹರಿವು ಹೆಚ್ಚಾಗಿದೆ.
ಈ ವರ್ಷ ಕೋವಿಡ್ ಲಾಕ್‍ಡೌನ್ ಕಾರಣದಿಂದ ಕಡು ಬೇಸಿಗೆಯಲ್ಲೂ ಜಲವಿದ್ಯುತ್‍ಗೆ ಬೇಡಿಕೆ ಕುಸಿದಿತ್ತು. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ 250 ರಿಂದ 260 ಮಿಲಿಯನ್ ಯೂನಿಟ್‍ಗಳಷ್ಟು (ಎಂ.ಯು) ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಈ ವರ್ಷದ ಬೇಡಿಕೆಯು 200 ಮಿಲಿಯನ್ ಯೂನಿಟ್‍ಗಿಂತಲೂ ಕಡಿಮೆಯಾಗಿತ್ತು. ಹೀಗಾಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಹೆಚ್ಚಿದೆ. ಹೀಗಾಗಿ ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಕದ್ರಾ ಜಲಾಶಯದ ಗೇಟ್‍ಗಳನ್ನು ತೆರೆಯಲಾಗಿದೆ.
ಈ ಬಗ್ಗೆ ಪಬ್ಲಿಕ್ ಟಿ.ವಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಭಾರೀ ಮಳೆಯಾಗುವುದಿಲ್ಲ. ಆದರೆ ಈ ಬಾರಿ ಚಂಡಮಾರುತದಿಂದಾಗಿ ಉತ್ತಮ ಮಳೆಯಾಗಿದೆ. ಹೀಗಾಗಿ ಮಳೆಗಾಲದ ಆರಂಭದಲ್ಲೇ ಅಲ್ಲಲ್ಲಿ ನೆರೆಯ ಸಾಧ್ಯತೆಗಳನ್ನು ಗುರುತಿಸಲಾಗಿದೆ. ಅದನ್ನು ಎದುರಿಸಲು ಸಿದ್ಧತೆ ಸಹ ಮಾಡಿಕೊಳ್ಳಲಾಗಿದೆ. ಹೊನ್ನಾವರ, ಸಿದ್ದಾಪುರ, ಶಿರಸಿ ಭಾಗದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಗಳಿದ್ದು, ಆಯಾ ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ಸಿಬ್ಬಂದಿ ನೇಮಿಸಲಾಗಿದೆ ಎಂದರು.
ಗುಂಡಳಬಾಳದಲ್ಲಿ ಕಾಳಜಿ ಕೇಂದ್ರ
ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಗುಂಡಳಬಾಳದಲ್ಲಿ ಐದು ಮನೆಗಳು ಜಲಾವೃತವಾಗಿವೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರವನ್ನು ಗುಂಡಳಬಾಳ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಲಾಗಿದೆ. ಸಿದ್ದಾಪುರ ಗಡಿ ಭಾಗದಲ್ಲಿ ವರದಾ ನದಿ ಸಹ ಧುಮ್ಮಿಕ್ಕಿ ಹರಿಯುತಿದ್ದು, ಅರೆಂದೂರು ಗ್ರಾಮದ ಭಾಗದಲ್ಲಿ 200 ಕ್ಕೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ.