ಶಿವಮೊಗ್ಗ: ತುಂಗಾನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಯುವತಿ ಸಾವನ್ನಪ್ಪಿದ್ದು, ಯುವಕನಿಗಾಗಿ ಶೋಧಕಾರ್ಯ ಮಾಡುತ್ತಿರುವ ಘಟನೆ ನಗರದ ಬೈಪಾಸ್ ರಸ್ತೆಯ ಹೊಸ ಸೇತುವೆ ಬಳಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ಜಿಲ್ಲೆಯ ಭದ್ರಾವತಿ ತಾಲೂಕಿನ ಹುರುಳಿಹಳ್ಳಿ ಗ್ರಾಮದ ಸಂತೋಷ್ (22) ಹಾಗೂ ಕಾಕನಹಸೂಡಿ ಗ್ರಾಮದ ಅನುಷಾ (19) ಎಂದು ಗುರುತಿಸಲಾಗಿದೆ. ಶುಕ್ರವಾರ ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿದ್ದ ತುಂಗಾ ನದಿಗೆ ಪ್ರೇಮಿಗಳಿಬ್ಬರು ಹಾರಿದ್ದಾರೆ.
ಈ ವೇಳೆ ಯುವಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಯುವತಿ ನದಿಯಲ್ಲಿ ಮುಳುಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಯುವತಿಯನ್ನು ನದಿಯಿಂದ ರಕ್ಷಿಸಿ ಮೇಲೆ ತಂದು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಕತ್ತಲಾಗುವರೆಗೂ ತುಂಗಾನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದರು. ಆದರೆ ಯುವಕ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ಹೀಗಾಗಿ ಇಂದು ಕೂಡ ಪೊಲೀಸರು ಯುವಕನಿಗಾಗಿ ಶೋಧ ಕಾರ್ಯ ನಡೆಸಲಿದ್ದಾರೆ.
ಪ್ರೇಮಿಗಳು ಇಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿ ಆಗಿತ್ತು ಎನ್ನಲಾಗಿದೆ. ಇಬ್ಬರು ಬೇರೆ ಜಾತಿ ಆಗಿದ್ದರಿಂದ ಇಬ್ಬರ ಪ್ರೀತಿಗೆ ಎರಡು ಮನೆಯವರ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತುಂಗಾ ನಗರ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.