ಶಿವಮೊಗ್ಗ: ಮುಂಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲ್ಕು ಗ್ರಾಮಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.
ಮೇ 11 ರಂದು ಮುಂಬೈನಿಂದ ಹಳ್ಳಿಬೈಲು ಗ್ರಾಮಕ್ಕೆ ವ್ಯಕ್ತಿಯೊಬ್ಬ ನಡೆದುಕೊಂಡೇ ಆಗಮಿಸಿದ್ದ. ಮುಂಬೈನಲ್ಲಿ ಹೋಟೆಲ್‍ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಗೆ ಗುರುವಾರ ಮಧ್ಯಾಹ್ನದಿಂದ ಜ್ವರ ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ ಆ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಪ್ರಾರಂಭವಾದ ಕಾರಣ ಆತನನ್ನು ಶಿವಮೊಗ್ಗದ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಆತ ಗ್ರಾಮದಲ್ಲಿ ಎಲ್ಲಾ ಕಡೆ ಸುತ್ತಾಡಿದ್ದ ಎಂಬ ಶಂಕೆಯ ಮೇಲೆ ಮುಳಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೈಲು, ರಂಜದಕಟ್ಟೆ, ಭೀಮನಕಟ್ಟೆ ಹಾಗೂ ಮುಳಬಾಗಿಲು ಗ್ರಾಮಗಳನ್ನು ಸಂಪೂರ್ಣವಾಗಿ ಇಂದು ಬೆಳಗ್ಗೆಯಿಂದ ಸೀಲ್‍ಡೌನ್ ಮಾಡಲಾಗಿದೆ. ಜ್ವರ ಬಂದ ವ್ಯಕ್ತಿಯ ಜೊತೆ ಬಂದಿದ್ದವರನ್ನು ಸಹ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿದೆ. ಆತನ ಮನೆಯವರನ್ನು ಪ್ರತ್ಯೇಕವಾಗಿ ತಾಲೂಕು ಆಡಳಿತ ಕ್ವಾರಂಟೈನ್ ಮಾಡಿದೆ.
Advertisement
Advertisement
ಗ್ರಾಮಗಳಲ್ಲಿ ಯಾರೊಬ್ಬರು ಮನೆಯಿಂದ ಹೊರ ಬರಬಾರದು ಎಂದು ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ಅವರು ಅಧಿಕಾರಿಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಇದರಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಭಯದ ವಾತಾವರಣ ಉಂಟಾಗಿದೆ. ಅಲ್ಲದೇ ಅಧಿಕಾರಿಗಳು ಹಾಗೂ ಪೊಲೀಸರು ಮುಂಬೈನಿಂದ ಬಂದ ವ್ಯಕ್ತಿಯ ಟ್ರ್ಯಾವೆಲ್ ಹಿಸ್ಟರಿ ಕಲೆ ಹಾಕಲು ಮುಂದಾಗಿದ್ದಾರೆ.