– ನೆರೆ ಪೀಡಿತ ಪ್ರದೇಶಗಳಿಗೆ ಈಶ್ವರಪ್ಪ ಭೇಟಿ
ಶಿವಮೊಗ್ಗ: ಕಳೆದ ಬಾರಿ ನೆರೆ ಬಂದ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ. ಬಿ.ಎಸ್ ಯಡಿಯೂರಪ್ಪ ಮಳೆಹಾನಿಗೆ ಒಳಗಾದ ಜನರಿಗೆ ಸಾಂತ್ವಾನ ಹೇಳಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವ ಭರವಸೆ ನೀಡಿದ್ರು. ಆದರೆ ಆ ಪ್ಯಾಕೇಜ್ ಹುಸಿಯಾಗಿತ್ತು. ಹಾನಿಯ ತೀವ್ರತೆ ಅರಿತು ನೀಡಿದ್ದ ಹೇಳಿಕೆ, ಕೇವಲ ಹೇಳಿಕೆಯಾಗಿಯೇ ಉಳಿದಿತ್ತು. ನೆರೆ ಬಂದು ಒಂದು ವರ್ಷವಾದರೂ ಪರಿಹಾರ ಸಿಗದೇ ಇದ್ದ ಗ್ರಾಮಕ್ಕೆ ಇದೀಗ ಪರಿಹಾರ ಸಿಗುವ ಭರವಸೆ ದೊರೆತಿದೆ. ಇದು ಕೂಡ ಭರವಸೆಯಾಗಿಯೇ ಉಳಿಯತ್ತಾ ಎಂಬ ಆತಂಕದಲ್ಲಿ ಇದೀಗ ಇಲ್ಲಿನ ಗ್ರಾಮಸ್ಥರಿದ್ದಾರೆ.
Advertisement
ಕಳೆದ ವರ್ಷ ಇದೇ ದಿನದಂದು ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹವೇ ಸೃಷ್ಟಿಯಾಗಿತ್ತು. ರೌದ್ರಾವತರಾದ ಮಳೆಗೆ ಅದೆಷ್ಟೋ ರೈತರ ಬದುಕೇ ಕೊಚ್ಚಿಕೊಂಡು ಹೋಗಿತ್ತು. ಆ ಗಾಯ ಮಾಸುವ ಮುನ್ನವೇ ಈ ಬಾರಿಯ ವರುಣಾಘಾತಕ್ಕೆ ಜನರು ನಲುಗಿ ಹೋಗಿದ್ದಾರೆ. ಕಳೆದ ಬಾರಿಯ ಪರಿಹಾರವೇ ಇದುವರೆಗೆ ಸಿಕ್ಕಿಲ್ಲ. ಈಗ ಮತ್ತೇ ಏನಾದರೂ ಅನಾಹುತ ನಡೆದರೆ ಎಂಬ ಆತಂಕದಲ್ಲಿ ಜನರಿದ್ದಾರೆ.
Advertisement
Advertisement
ಹೌದು ಶಿವಮೊಗ್ಗ ಜಿಲ್ಲೆಯಲ್ಲೂ ಕಳೆದ ವರ್ಷ ಇದೇ ರೀತಿ ನೆರೆ ಪ್ರವಾಹ ಉಂಟಾಗಿ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದು, ಸುಮಾರು 40 ಎಕರೆಯಷ್ಟು ಭೂಮಿ ನಾಶವಾಗಿತ್ತು. ಅಡಿಕೆ ತೋಟ, ಭತ್ತದ ಗದ್ದೆಗಳು ಮಣ್ಣು ಪಾಲಾಗಿತ್ತು. ನೆರೆ ಹಾವಳಿಯಿಂದಾಗಿ ಇಲ್ಲಿನ ರೈತರು ಕಂಗಾಲಾಗಿದ್ರು. ಈ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿ.ಎಂ. ಯಡಿಯೂರಪ್ಪ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತರ ಬವಣೆಯನ್ನು ಆಲಿಸಿದ್ರು. ಗುಡ್ಡ ಕುಸಿತ ಹಾಗೂ ಭಾರೀ ಮಳೆಯಿಂದಾಗಿ ರಾಸುಗಳು ಸಾವನಪ್ಪಿದ್ದವು. ರಾಸುಗಳ ಸಾವಿಗೆ ಸಾಂಕೇತಿಕವಾಗಿ 90 ಸಾವಿರ ರೂ. ಹಾಗೂ ಜಮೀನು ನಾಶವಾಗಿದ್ದಕ್ಕೆ ಎಕರೆಗೆ 15 ಸಾವಿರ ರೂಗಳ ಪರಿಹಾರದ ಚೆಕ್ ನ್ನು ವಿತರಿಸಿ, ಸಾಂತ್ವನ ಹೇಳಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ರು.
Advertisement
ಈ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಇಂದಿನವರೆಗೂ ಪರಿಹಾರ ವಿತರಣೆಯಾಗಿಲ್ಲ ಎಂಬುದು ಈ ಭಾಗದ ಗ್ರಾಮಸ್ಥರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ಮಳೆ ಕಡಿಮೆಯಾದ ನಂತರ ಜಮೀನು ಸರಿಪಡಿಸಿ, ಅಡಿಕೆ ಗಿಡ ಹಾಕಿಸಿಕೊಡುವ ಬಗ್ಗೆ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಜೊತೆಗೆ ಎನ್.ಆರ್.ಇ.ಜಿ. ಯೋಜನೆಯಡಿಯಲ್ಲಿ, ತೋಟ ದುರಸ್ತಿ ಮತ್ತು ಶಿಲ್ಟ್ ತೆಗೆಯುವ ಕಾಮಗಾರಿ ನಡೆಸುವುದಲ್ಲದೇ, ಶೀಘ್ರವೇ ಉಳಿದ ಪರಿಹಾರದ ಹಣ ಬಿಡುಗಡೆ ಮಾಡುವುದಾಗಿ ಮತ್ತೆ ಭರವಸೆ ನೀಡಿದ್ರು.
ಅಂದಹಾಗೆ ಕಳೆದ ಬಾರಿ ನೆರೆ ಸಂದರ್ಭದಲ್ಲಿ ಗುಡ್ಡ ಕುಸಿದು, ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 1 ಎಕರೆಗೆ 15 ಸಾವಿರ ರೂ. ಪರಿಹಾರ ನೀಡಿರುವುದು ಬಿಟ್ಟರೆ, ಬೇರೆ ಯಾವುದೇ ಪರಿಹಾರ ಇದುವರೆಗೂ ದೊರೆತಿಲ್ಲ. ತೋಟ ಗದ್ದೆ ಹಾನಿಯಾಗಿ ಹೋಗಿದೆ. ಬದುಕುವುದಕ್ಕೆ ಆದಾಯದ ಮೂಲವೇ ಇಲ್ಲವಾಗಿದ್ದು, ಇಲ್ಲಿನ ರೈತರು ಶಾಶ್ವತ ಪರಿಹಾರ ಕೊಡಿಸಿ ಅಂಬ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರ್ತಾರೆ, ವೀಕ್ಷಣೆ ಮಾಡ್ತಾರೆ ಪರಿಹಾರ ನೀಡ್ತೇವೆ ಅಂತಾ ಹೇಳಿ ಹೋಗ್ತಾರೆ. ಆದರೆ ಯಾರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಷ್ಟಪಟ್ಟು ಬೆಳೆಸಿದ್ದ ತೋಟ ಇಲ್ಲವಾಗಿದೆ. ವರ್ಷಕ್ಕೆ 15 ಸಾವಿರ ರೂ. ಸಾಕಾ ಎಂದು ರೈತರು ಪ್ರಶ್ನಿಸುತ್ತಾರೆ. ಕಳೆದ ಬಾರಿ ಸ್ವತಃ ಮುಖ್ಯಮಂತ್ರಿಯವರೇ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿ ತೆರಳಿದ್ದರು ಕೂಡ ಇದುವರೆಗೂ ಯಾವುದೇ ಪ್ಯಾಕೇಜ್ ಘೋಷಣೆಯಾಗಿಲ್ಲ ಎಂಬ ಆತಂಕ ನಷ್ಟದಲ್ಲಿರುವ ರೈತರದ್ದು.
ಒಟ್ಟಾರೆ ಒಂದು ವರ್ಷದ ಬಳಿಕ ಭೇಟಿ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಈ ಭಾಗದ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ರೈತರಿಗೆ ಈಗಲಾದರೂ ಪರಿಹಾರ ಸಿಗುತ್ತಾ ಎಂಬ ಪ್ರಶ್ನೆ ಈಗ ಎದುರಾಗಿದೆ. ಹಣದ ಸಮೇತವಾಗಿ ಬಂದಿದ್ದೇವೆ ಎಂದು ಹೇಳುವ ಸಚಿವರು ಮತ್ತು ಜಿಲ್ಲಾಡಳಿತ ಎಷ್ಟು ದಿನದೊಳಗೆ ಇಲ್ಲಿನ ಸಂತ್ರಸ್ತರಿಗೆ ಪರಿಹಾರದ ಹಣ ಬಿಡುಗಡೆ ಮಾಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.