ಹೈದರಾಬಾದ್: ಆಕ್ಸಿಜನ್ ವ್ಯತ್ಯಯದಿಂದಾಗಿ ಮೃತಪಟ್ಟ 11 ಮಂದಿಯ ಕುಟುಂಬಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪರಿಹಾರ ಘೋಷಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಪ್ರಸ್ತುತ ಇರುವ ಕೋವಿಡ್ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ವೇಳೆ ಸಿಎಂ ಈ ಪರಿಹಾರ ಘೋಷಿಸಿದ್ದಾರೆ.
ಆಗಿದ್ದೇನು..?
ರುಯಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. ಆಕ್ಸಿಜನ್ ಟ್ಯಾಂಕರ್ ಬರುವುದು ತಡವಾಗಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ದುರಂತ ಸಂಬಂಧ ಆಂಧ್ರ ಸರ್ಕಾರ ತನಿಖೆ ನಡೆಸುವಂತೆ ಆದೇಶ ನೀಡಿತ್ತು.
ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ರೋಗಿಗಳಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಂಡುಬಂತು. ಕೂಡಲೇ ಬೇರೆ ಕಡೆಯಿಂದ ಆಕ್ಸಿಜನ್ ತರಿಸಲು ವ್ಯವಸ್ಥೆ ಮಾಡಲಾಯಿತು. ಆದರೆ ಆಕ್ಸಿಜನ್ ಟ್ಯಾಂಕರ್ ಆಸ್ಪತ್ರೆಗೆ ಆಗಮಿಸಿದೆ.
ಆಕ್ಸಿಜನ್ ಅನ್ನು ಟ್ಯಾಂಕರ್‍ನಿಂದ ರಿಲೋಡ್ ಮಾಡಲು 5 ನಿಮಿಷ ಬೇಕಾಯಿತು. ಆದರೆ ಈ ಮಧ್ಯೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ರೋಗಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ಕೊರೊನಾ ರೋಗಿಗಳು ಆಕ್ಸಿಜನ್ ಸಿಗದೆ ಸುಮಾರು 45 ನಿಮಿಷಗಳ ಕಾಲ ಒದ್ದಾಡಿ ಪ್ರಾಣಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯರು ರೋಗಿಗಳನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಚಿತ್ತೂರು ಡಿಸಿ ಎಂ ಹರಿ ನಾರಾಯಣ ತಿಳಿಸಿದ್ದರು.