ಕೋಲಾರ : ನಗರದ ವೈದ್ಯರ ಕುಟುಂಬವೊಂದು ಕುಟುಂಬ ಸಮೇತರಾಗಿ ಕೋವಿಡ್ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ನಗರದ ವೈದ್ಯರೊಬ್ಬರ ಕುಟುಂಬದ ಹಿರಿಯರೊಬ್ಬರು ಕಳೆದ ಹನ್ನೊಂದು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಹಾಗೂ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೇ ನೋವಿನಲ್ಲಿ ಇಡೀ ಕುಟುಂಬ ಮೃತರ ಹನ್ನೊಂದನೇ ದಿನದ ತಿಥಿ ಕಾರ್ಯ ಮಾಡಿದ್ದರು. ಈ ವೇಳೆ ಇಡೀ ಕುಟುಂಬಕ್ಕೊಂದು ಆಘಾತಕಾರಿ ಸುದ್ದಿಯೊಂದು ಎರಗಿ ಬಂದಿದ್ದು, ಕುಟುಂಬದ 8 ಜನರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಇಡೀ ಕುಟುಂಬಕ್ಕೆ ಕೊರೊನಾ ಸೊಂಕು ತಗುಲಿದ್ದಾದರೂ ಹೇಗೆ ಎನ್ನುವುದನ್ನು ಹುಡುಕಿದಾಗ ಅಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ ಕುಟುಂಬದ ಹಿರಿಯ ವ್ಯಕ್ತಿಯ ಪತ್ನಿಗೆ ಅನಾರೋಗ್ಯ ಕಾಡಿತ್ತು, ಈ ವೇಳೆ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ಅನಾರೋಗ್ಯ ಪೀಡಿತರ ಆರೈಕೆಗಾಗಿ ಆಸ್ಪತ್ರೆಗೆ ಹೋಗಿ ಬಂದಿದ್ದರು.
ವೈದ್ಯರ ಕುಟುಂಬವಾಗಿದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕುಟುಂಬದ ಸದಸ್ಯರೆಲ್ಲ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ವೇಳೆ ಕುಟುಂಬಸ್ಥರೆಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಸದ್ಯ ಮನೆಯನ್ನು ಸೀಲ್‌ಡೌನ್ ಮಾಡಿರುವ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸೋಂಕು ನಿವಾರಕ ಸಿಂಪಡಣೆ ಮಾಡಿದೆ. ಸೋಂಕಿತರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾರಲ್ಲೂ ಯಾವುದೇ ರೋಗ ಲಕ್ಷಣಗಳಿಲ್ಲ ಹಾಗಾಗಿ ಅವರನ್ನು ಎರಡನೇ ಬಾರಿ ಟೆಸ್ಟ್‌ಗೆ ಒಳಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ.