ಬೆಂಗಳೂರು: ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳನ್ನಾಡಿದ್ದ ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ಜಯಶ್ರೀ ರಾಮಯ್ಯ ಕೊನೆಗೂ ಸಾವಿನ ಮನೆಯ ಕದ ತಟ್ಟಿದ್ದಾರೆ.
ಹೌದು. ನಟಿ ಜಯಶ್ರೀ ಅವರು ಮಾಗಡಿ ಮುಖ್ಯರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ತಿಂಗಳ ಹಿಂದೆ ಅಂದ್ರೆ 2020ರ ಡಿಸೆಂಬರ್ 25ರಂದು ವೃದ್ಧಾಶ್ರಮ ಸೇರಿದ್ದು, ಮಾವ ಗಿರೀಶ್ ದಾಖಲಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದೀಗ ನಟಿ ವೃದ್ಧಾಶ್ರಮ ಸೇರಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ನಟಿ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿವೆ.
ನಿನ್ನೆ ರಾತ್ರಿ ಊಟ ಮುಗಿಸಿ ಜಯಶ್ರೀ ಕೋಣೆ ಸೇರಿದ್ದರು. ನಂತರ ಹೊರಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇದೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತಾ ಎಂಬ ಅನುಮಾನ ಹುಟ್ಟಿದೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆಗೆ ಶರಣು