ಚಿತ್ರ: ‘ಮಹಿಷಾಸುರ’.
ನಿರ್ದೇಶಕ: ಉದಯ್ ಪ್ರಸನ್ನ.
ನಿರ್ಮಾಪಕ: ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ.
ಛಾಯಾಗ್ರಹಣ: ಕೃಷ್ಣ.
ಸಂಗೀತ: ಸುನೀಲ್ ಕೌಶಿ, ಸಾಯಿ ಕಿರಣ್.
ತಾರಾಬಳಗ: ಸುದರ್ಶನ್, ರಾಜ್ ಮಂಜು, ಬಿಂಧುಶ್ರೀ, ರಘು ಪಾಂಡೇಶ್, ರಾಕ್ಲೈನ್, ಸುಧಾಕರ್, ಇತರರು.
‘ಮಹಿಷಾಸುರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ನವ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬಂದ ‘ಮಹಿಷಾಸುರ’ ಚಿತ್ರ ಟೀಸರ್, ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕ ಪ್ರಭುಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.
Advertisement
ಸಮಾಜದಲ್ಲಿ ದುರುಳರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಜನರು ಹೇಗೆ ದಂಗೆ ಏಳುತ್ತಾರೆ ಎನ್ನುವುದು ‘ಮಹಿಷಾಸುರ’ ಚಿತ್ರದ ಒನ್ಲೈನ್ ಸ್ಟೋರಿ. ಇಡೀ ಸಿನಿಮಾ ಮೆಳೆಕೋಟೆ ಎಂಬ ಹಳ್ಳಿಯಲ್ಲಿ ಚಿತ್ರಣಗೊಂಡಿದ್ದು, ರಾಜಕರಣಿಗಳ ದಬ್ಬಾಳಿಕೆ, ದೌರ್ಜನ್ಯದಿಂದ ಸೋತು ಹೋದ ಇಲ್ಲಿನ ಜನರು ಯಾವ ರೀತಿ ಮೇಲ್ವರ್ಗದ ಮೇಲೆ ಸವಾರಿ ಮಾಡಿ ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ ಎನ್ನೋದನ್ನ ನೈಜವಾಗಿ ತೆರೆ ಮೇಲೆ ತರಲಾಗಿದೆ. ದಬ್ಬಾಳಿಕೆಯನ್ನು ಜನರು ಎಷ್ಟೇ ತಾಳ್ಮೆಯಿಂದ ಸಹಿಸಿಕೊಂಡ್ರು ಸಹನೆ ಕಟ್ಟೆ ಒಡೆದಾಗ ಹೇಗೆ ಮಹಿಷಾಸುರನ ರೂಪ ತಾಳುತ್ತಾರೆ. ಇಡೀ ಹಳ್ಳಿ ಯಾವ ರೀತಿ ರಣರಂಗವಾಗಿ ಮಾರ್ಪಾಡಾಗುತ್ತೆ ಅನ್ನೋದನ್ನ ತುಂಬಾ ಪರಿಣಾಮಕಾರಿಯಾಗಿ ನಿರ್ದೇಶಕರು ಹೇಳ ಹೊರಟಿದ್ದಾರೆ.
Advertisement
Advertisement
Advertisement
ತ್ರಿಕೋನ ಪ್ರೇಮಕಥೆಯ ಜೊತೆ ಜೊತೆಗೆ ಕಥೆಯನ್ನು ಕಟ್ಟಿಕೊಂಡು ಹೋದ ಪರಿ ಪ್ರೇಕ್ಷಕರನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಪ್ಲಸ್ ಪಾಯಿಂಟ್ ಕಲಾವಿದರು, ನಿರ್ದೇಶಕರು ನವ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಂಡಿರೋದ್ರಿಂದ ತೆರೆ ಮೇಲೆ ನೈಜ ಅಭಿನಯ ಕಾಣಬಹುದಾಗಿದೆ. ನಾಯಕಿ ಬಿಂಧುಶ್ರೀ ಕಾವೇರಿ ಪಾತ್ರದಲ್ಲಿ ನಟಿಸಿದ್ದು, ಮುಗ್ಧ ಹೆಣ್ಣು ಮಗಳ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ.
ರಾಜಕರಣಿಗಳ ಪಾತ್ರದಲ್ಲಿ ರಘು ಪಾಂಡೇಶ್, ರಾಕ್ಲೈನ್ ಸುಧಾಕರ್ ಪಾತ್ರ ಗಮನ ಸೆಳೆಯುತ್ತದೆ. ನಾಯಕ ನಟರಾದ ರಾಜ್ ಮಂಜು ಹಾಗೂ ಸುದರ್ಶನ್ ಮೊದಲ ಸಿನಿಮಾವಾದರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಛಾಯಾಗ್ರಹಕ ಕೃಷ್ಣ ಅವರ ಕೆಲಸವನ್ನು ಇಲ್ಲಿ ಶ್ಲಾಘಿಸಲೇಬೇಕು. ನಿರ್ದೇಶಕರ ಮನದಲ್ಲಿನ ಚಿತ್ರಣವನ್ನು ಹಾಗೆಯೇ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ಕೃಷ್ಣ. ಸುನೀಲ್ ಕೌಶಿ, ಸಾಯಿ ಕಿರಣ್ ಸಂಗೀತ ‘ಮಹಿಷಾಸುರ’ ಚಿತ್ರಕ್ಕೆ ಮೆರಗು ನೀಡಿದೆ.
ಉದಯ್ ಪ್ರಸನ್ನ ಅವರಿಗಿದು ಮೊದಲ ಸಿನಿಮಾದರೂ ಹಲವು ವರ್ಷಗಳ ಅನುಭವ ನಿರ್ದೇಶನದಲ್ಲಿ ಇರುವುದರಿಂದ ತಮ್ಮ ನಿರ್ದೇಶನದ ಶಕ್ತಿ, ಪ್ರತಿಭೆಯನ್ನು ಈ ಸಿನಿಮಾದಲ್ಲಿ ಸಾಬೀತು ಮಾಡಿದ್ದಾರೆ. ಒಟ್ಟಾರೆಯಾಗಿ ಒಂದೊಳ್ಳೆ ಅನುಭವ, ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಮನೋರಂಜನೆ ನೀಡುವಲ್ಲಿ ಮಹಿಷಾಸುರ ಚಿತ್ರ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗೋದಿಲ್ಲ.
ರೇಟಿಂಗ್: 3.5 / 5