ಹಾವೇರಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ ತಾಲೂಕು ಮಟ್ಟದಲ್ಲಿ ಸಹ ಕೊರೊನಾ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೊರೊನಾ ಆಸ್ಪತ್ರೆ ಪ್ರಾರಂಭಿಸಿದೆ. ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಆಸ್ಪತ್ರೆ ಆರಂಭಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಾಲೂಕು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋವಿಡ್-19 ಆಸ್ಪತ್ರೆ ಆರಂಭವಾಗಿದೆ. ತಾಲೂಕು ಸರಕಾರಿ ಆಸ್ಪತ್ರೆ ಕಂಪೌಂಡ್‍ಗೆ ಹೊಂದಿಕೊಂಡು ಸಾಕಷ್ಟು ಮನೆಗಳು ಇರುವುದರಿಂದ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಸರ್ಕಾರಿ ವಸತಿ ನಿಲಯಗಳಿಗೆ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕೋವಿಡ್-19 ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸಿ, ಇಲ್ಲವೇ ಆಸ್ಪತ್ರೆ ಸುತ್ತಮುತ್ತಲಿನ ಜನರಿಗೆ ಬೇರೆಡೆ ಮನೆಗಳ ವ್ಯವಸ್ಥೆ ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ ಸಾಮಾಜಿಕ ಅಂತರ ಮರೆತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.