ಬೆಂಗಳೂರು: ಮಗನ ಆರೈಕೆಯಲ್ಲಿರುವ ನಟಿ ಮೇಘನಾ ರಾಜ್ ಅವರು ತಾಯ್ತನ ಅನ್ನೋದು ಕಠಿಣ ಹಾಗೂ ಬಹಳ ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ್ದ ಅವರು, ಈ ಭೂಮಿ ಮೇಲೆ ಅತ್ಯಂತ ಕಷ್ಟದ ಕೆಲಸ ಅಂದ್ರೆ ಅದು ತಾಯ್ತನ ಎಂಬುದನ್ನು ರಿವೀಲ್ ಮಾಡಿದ್ದಾರೆ. ತಾನೊಬ್ಬ ತಾಯಿಯಾದ ಬಳಿಕವೇ ಅದರ ಮೌಲ್ಯ ಅರ್ಥವಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಈ ಜಗತ್ತಿನ ಅತ್ಯಂತ ಕಷ್ಟದ ಕೆಲಸವೆಂದರೆ ಅದು ತಾಯ್ತನ ಅನ್ನೋದು ನನಗೆ ಈಗ ಮನವರಿಕೆಯಾಗಿದೆ. ತಾಯಿಯ ಪ್ರೀತಿ ಹಾಗೂ ಮೌಲ್ಯವನ್ನು ಸ್ವತಃ ನೀವು ಅನುಭವಿಸುವವರೆಗೂ ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಮಾತು ನಿಜವಾಗಲೂ ಸತ್ಯ ಅನಿಸಿದೆ. ನನ್ನ ತಾಯಿ ನನ್ನನ್ನು ಅತ್ಯಂತ ಮುದ್ದಿಸಿ ಬೆಳೆಸಿದ್ದಾರೆ. ನನಗೆ ಬೇಕಾದ್ದನ್ನೆಲ್ಲ ಮಾಡಿದ ತಾಯಿಗೆ ನನ್ನ ಸೆಲ್ಯೂಟ್ ಎಂದು ತಿಳಿಸಿದ್ದಾರೆ.
ತಾಯಿ ಕೇವಲ ಚಿಕ್ಕಂದಿನಲ್ಲಿ ಮಾತ್ರವಲ್ಲ ಈಗಲೂ ನನಗೆ ಅವರೇ ಶಕ್ತಿ. ನನಗೆ ಧೈರ್ಯ ತುಂಬಿ ಜೀವನ ನಡೆಸಲು ಸಹರಿಸುತ್ತಾರೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದೆ. ಆಗ ಪ್ರತಿ ಹಂತದಲ್ಲಿಯೂ ನನ್ನ ಜೊತೆಯಾಗಿ ಬೆನ್ನಲುಬಾಗಿ ನಿಂತು ಧೈರ್ಯ ತುಂಬಿದರು. ಎಲ್ಲರೂ ನನ್ನ ಧೈರ್ಯವಂತೆ ಎಂದು ಹೇಳಿದರು. ಆದರೆ ನನ್ನೊಳಗಿದ್ದ ಸಂಕಟ, ನೋವನ್ನು ನನ್ನ ತಾಯಿ ಮಾತ್ರ ನೋಡಿದ್ದಾರೆ ಎಂದು ಹೇಳುತ್ತಾ ಮೇಘನಾ ಗದ್ಗದಿತರಾದರು.
2020ರ ಅಕ್ಟೋಬರ್ 22ರಂದು ಮೇಘನಾ ರಾಜ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತರು. ಈ ಮೂಲಕ ಪತಿ ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಸ್ವತಃ ಚಿರುನೇ ಮತ್ತೆ ಹುಟ್ಟಿ ಬಂದಷ್ಟು ಸಂತಸವಾಗಿದೆ. ಈ ಮಧ್ಯೆ ತಾಯಿ- ಮಗು ಹಾಗೂ ಮೇಘನಾ ತಂದೆ-ತಾಯಿಯನ್ನು ಕೊರೊನಾ ವಕ್ಕರಿಸಿಕೊಂಡಿತ್ತು. ಹೀಗಾಗಿ ತಾಯಿ-ಮಗ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯದ ಟೆಸ್ಟ್ ನಲ್ಲಿ ವರದಿ ನೆಗೆಟಿವ್ ಬಂದಿದ್ದು, ತಾಯಿ- ಮಗ ಆರೋಗ್ಯವಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಗನಿಗೆ ನಾಮಕರಣ ಕಾರ್ಯಕ್ರಮವನ್ನು ಕೂಡ ನೆರವೇರಿಸಲಿದ್ದು, ಆ ದಿನಕ್ಕಾಗಿ ಚಿರು ಹಾಗೂ ಮೇಘನಾ ಅಭಿಮಾನಿಗಳು ಕಾಯುತ್ತಿದ್ದಾರೆ.